ಗುರುಗಳು ಕೈ ಹಿಡಿದರೆ ದಡ ಸೇರುವವರೆಗೆ ನಮ್ಮ ಜೊತೆ ಇರುತ್ತಾರೆ

ಹದಿನೇಳು ವರ್ಷಗಳ  ಹಿಂದೆ  ಶುರುವಾಯ್ತು  ಒಂದು ಸಂತೃಪ್ತ ಹಾಗೂ ಆನಂದದ  ಪಯಣ. ಗುರು ಕೃಪೆಯ ಮುನ್ನ ನನ್ನ ಜೀವನವು  ಸಾಮಾನ್ಯವಾಗಿತ್ತು. ಅರೋಗ್ಯದ  ತೊಂದರೆಯಿಂದ ಬಳಲುತಿದ್ದ ನಾನು, ದೆಹಲಿಯಲ್ಲಿ ನೋಡದಿರುವ ವೈದ್ಯರಿಲ್ಲ. ಏನೇ  ಮಾಡಿದರೂ, ಯಾವ ವೈದ್ಯರನ್ನು  ನೋಡಿದರೂ ನನ್ನ ಆರೋಗ್ಯ ಸಮಸ್ಯೆಗೆ ಪರಿಹಾರ ದೊರೆಯಲೇ  ಇಲ್ಲ.  ಎಲ್ಲರ ಜೀವನದಲ್ಲೂ 'ಟರ್ನಿಗ್  ಪಾಯಿಂಟ್ ' ಇರುತ್ತದೆ. ನನ್ನ ಜೀವನದ ಟರ್ನಿಗ್ ಪಾಯಿಂಟ್  ಆರ್ಟ್ ಆಫ್ ಲಿವಿಂಗ್ ನ ಹ್ಯಾಪಿನೆಸ್ ಕೋರ್ಸ್ ಮಾಡಿದಾಗ ಮೂಡಿತು ಎoದರೆ ತಪ್ಪಾಗುವುದಿಲ್ಲ.

ಹ್ಯಾಪಿನೆಸ್ ಕೋರ್ಸ್ ಮಾಡಿದ ಕ್ಷಣದಿಂದ, ನಾನು ಹೆಚ್ಚು ಆರೋಗ್ಯವಂತೆಯಾದೆ. ನನ್ನ ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಒಂದು ಹೊಸ ಅಧ್ಯಾಯ ಶುರುವಾಯಿತು. ನನ್ನ  ಜೀವನದಲ್ಲಿ ಆದ ಪರಿವರ್ತನೆಯನ್ನು ಕಂಡ ನನ್ನ ಕುಟುಂಬದವರು ಸoತುಷ್ಟರಾದರು. ನನ್ನ ಪತಿ ಸೇನೆಯಲ್ಲಿ  ಸೇವೆ ಮಾಡುತ್ತಾರೆ, ಹೀಗಾಗಿ ರಕ್ಷಣಾಪಡೆಯ ಎಲ್ಲಾ ಸಂಭ್ರಮಗಳಿಗೆ  ನಾವು  ಹೋಗುತ್ತಿದ್ದೆವು.  ಹ್ಯಾಪಿನೆಸ್ ಕೋರ್ಸ್ ನಂತರ ನನ್ನಲ್ಲಿ ಪರಿವರ್ತನೆ ಕಂಡ ನನ್ನ  ಉತ್ಸುಕ ಸ್ನೇಹಿತರ ಜೊತೆ , ನಾನು  ಗುರುದೇವರ ಸಂದೇಶವನ್ನು ಹಂಚಿಕೊಳ್ಳಲು ಶುರು ಮಾಡಿದೆ.  ಈ ಮೂಲಕ ರಕ್ಷಣಾ ಪಡೆಯ ಎಲ್ಲಾ  ವರ್ಗದ ಜನರ  ಜೀವನದಲ್ಲಿ ಬದಲಾವಣೆಯ ಅಲೆಯನ್ನು ತರಲು ಮೊದಲ ಹೆಜ್ಜೆ ಇಟ್ಟೆ.
    
ಪೂಜ್ಯ ಗುರುದೇವರ ಕೃಪೆಯಿಂದ 2001ರಿಂದ  ಬೆಂಗಳೂರಿನಲ್ಲಿ  ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕಿಯಾಗಿ ಸಮಾಜದ ಬಡ ಹಾಗೂ ದುರ್ಬಲ ಜನರಿಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತು. ನಾನು ಕೋರ್ಸ್ ಹೇಳಿಕೊಡುವಾಗ ಪ್ರತಿಯೊಬ್ಬರ ಜೀವನದಲ್ಲಿ ಪರಿವರ್ತನೆಯನ್ನು ಕಂಡು ಸಂತುಷ್ಟಗೊಂಡೆ. ಅವರಲ್ಲಿ “ಎಲ್ಲರೂ ನಮ್ಮವರೇ” ಎನ್ನುವ ಭಾವನೆಯು ಜಾಗರೂಕಗೊಂಡಿದ್ದನ್ನು  ಕಂಡು ಗುರುದೇವರ  ಆಸೆಯಂತೆ  “ವಸುಧೈವ  ಕುಟುಂಬಕಂ”  ಸಮಾಜದಲ್ಲಿ ಸೃಷ್ಟಿಯಾಗುತ್ತಿದೆ ಎಂದೆನಿಸಿತು.

“ಸಂಘಚ್ಛಧ್ವಂ” ಎನ್ನುವ ಮಂತ್ರದಂತೆ ಎಲ್ಲರೂ  ಒಗ್ಗೂಡಿ ಮುನ್ನೆಡೆಯೋಣ ಎಂದು, ಸಮಾಜದಲ್ಲಿ ಪರಿವರ್ತನೆ  ತರಲು ವಿದ್ಯಾರಣ್ಯದ ಸುತ್ತಮುತ್ತಲೂ ಇರುವ ಸರ್ಕಾರಿ ಶಾಲೆ ಮತ್ತು ಹಳ್ಳಿಗಳನ್ನು ದತ್ತು ತೆಗೆದು ಕೊಂಡು, ಅಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಂಡೆವು. ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ  ಶಾಲೆಯ ಶಿಕ್ಷಕರು ಮತ್ತು ಮಕ್ಕಳ ಸಹಯೋಗದೊಂದಿಗೆ  ಪ್ಲಾಸ್ಟಿಕ್-ಮುಕ್ತ  ಪರಿಸರ  ಹಾಗೂ  ಸಸಿ ನೆಡುವ ಕಾರ್ಯಕ್ರಮಗಳನ್ನೂ  ನಡೆಸುತ್ತಿದ್ದೇವೆ.

ಗುರುಗಳ ನಿರಂತರವಾದ ಪ್ರೇರಣೆ ಮತ್ತು ಆಶೀರ್ವಾದ ನನ್ನೊoದಿಗೆ  ಸದಾ ಇರುವುದರಿಂದ ನಾನು ಈ ಎಲ್ಲ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಸದಾಕಾಲವೂ ಗುರುಗಳ ಚೈತನ್ಯವು ನನ್ನ ಜೀವನದಲ್ಲಿ ತುಂಬಿದೆ.

ನನ್ನ ಜೀವನವು ಗುರುಕೃಪೆಯ  ಮುನ್ನ ಹೋರಾಟಭರಿತ ಮತ್ತು ಸ್ವಾರಸ್ಯರಹಿತವಾಗಿತ್ತು. ಈಗ ಗುರುದೇವರ ಆಶೀರ್ವಾದದಿಂದ, ಹರ್ಷೋಲ್ಲಾಸದಿಂದ ತುಂಬಿದ ಸಂತೃಪ್ತ ಜೀವನ ನನ್ನದಾಗಿದೆ. ಸೇವೆ, ಸತ್ಸಂಗಗಳು ಮತ್ತು ಗುರುಗಳ ಸಂದೇಶದ ಪ್ರಸಾರದ ಹೊರತು ನನ್ನ ದಿನ ಮುಗಿಯುವುದಿಲ್ಲ.                        

ಒಬ್ಬೊಬ್ಬರು  ಒಂದೊಂದು ಹಂತದಲ್ಲಿ ಗುರುಕೃಪೆಗೆ ಪಾತ್ರರಾಗುತ್ತಾರೆ. ಗುರುವಿನ ಒಂದು ಮಾತು ಮತ್ತು ದರ್ಶನ ಮಾತ್ರದಿಂದಲೇ ಜೀವನವು ಸನ್ಮಾರ್ಗದಲ್ಲಿ ಸಾಗುತ್ತದೆ. ಒಂದು ಬಾರಿ ಗುರುಗಳು  ಕೈ ಹಿಡಿದರೆ ದಡ ಸೇರುವವರೆಗೆ ನಮ್ಮ ಜೊತೆ ಇರುತ್ತಾರೆ. ನಾನು ಎಷ್ಟು ಬರೆದರೂ ಗುರುವಿನ  ಕೃಪೆ ವರ್ಣಿಸಲು ಅಸಾಧ್ಯ. ಅನುಭವ ಮಾತ್ರದಿಂದಲೇ ತಿಳಿಯಲು ಸಾಧ್ಯ.