ಯುವಜನತೆಗಾಗಿ ಏಳು ಧ್ಯಾನದ ಮಂತ್ರಗಳು: ಸ್ಥಿರವಾಗಿ ಕುಳಿತಿರಿ, ಪರ್ವತಗಳನ್ನು ಕದಲಿಸಿ

ಮನುಷ್ಯನ ಜೀವನದಲ್ಲಿ ಎಲ್ಲ ಸಾಹಸಗಳು ಸಾಮಾನ್ಯವಾಗಿ 16 ರಿಂದ 25 ವರ್ಷಗಳ ವಯಸ್ಸಿನ ಕಾಲದಲ್ಲಿ ಕೇಂದ್ರೀಕೃತವಾಗಿರುತ್ತವೆ. ಈ ವಯಸ್ಸಿನಲ್ಲಿ ಬಿರುಗಾಳಿಯ ಮೇಲೆ ಸವಾರಿ ಮಾಡಿ ಎತ್ತೆರೆತ್ತರಕ್ಕೆ ಹಾರಲು ಕಲಿಯುವುದು ಕಡ್ಡಾಯವಾಗಿರುತ್ತದೆ.  ನಮ್ಮ ಆಯ್ಕೆ, ಮಾತು, ಕ್ರಿಯೆಗಳು ನಮ್ಮ ಅಲೋಚನೆಗಿಂತಲೂ ವೇಗವಾಗಿ ಓಡುತ್ತಿರುತ್ತವೆ ಹಾಗೂ ಅವೆಲ್ಲವೂ ಮೊದಲನೇ ಬಾರಿಯೇ  ಸರಿಯಾದ ಗುರಿಯನ್ನು ತಲುಪುವುದು  ಅವಶ್ಯಕವಾಗಿರುತ್ತದೆ. ನಮ್ಮ ಸ್ನೇಹಿತರೇ ನಮ್ಮ ಪ್ರಭಾವದ ವಲಯದಲ್ಲಿ ಅತ್ಯಂತ ಸಮೀಪದವರು ಮತ್ತು ನಮ್ಮ ಸಂತೋಷದ ಬಹುದೊಡ್ಡ ಕಾರಣವಾಗಿರುತ್ತಾರೆ. ಜೀವನದ ಈ ಹಂತದಲ್ಲಿ, ಧ್ಯಾನವು ನಮ್ಮ ಬಲಿಷ್ಠವಾದ ಮೈತ್ರಿಯಾಗಬಹುದು..

#1 ಸಮರಸದ  ಸ್ವಭಾವವನ್ನು ಪಡೆಯಿರಿ

" ನಾನು ತುಂಬಾ ಆಕ್ರಮಣಕಾರಿ ಮತ್ತು ಕ್ರೂರ ಪ್ರವೃತ್ತಿಯನ್ನು ಹೊಂದಿದ್ದು ಕಾಲೇಜಿನಲ್ಲಿ ಜಗಳಕ್ಕೆ ಬೀಳುತ್ತಿದ್ದೆ.  ನನಗೆ ಸ್ನೇಹಿತರೇ ಇರಲಿಲ್ಲ. ನಾನು ಅಸಹಾಯಕನಾಗಿಬಿಟ್ಟಿದ್ದೆ.  ಧ್ಯಾನವು ನನ್ನನ್ನು ಶಾಂತಗೊಳಿಸಿತು. ಈಗ ನನಗೆ ಬಹಳ ಜನ ಸ್ನೇಹಿತರಿದ್ದಾರೆ. ನಾನು ಅವರ ಕಾಳಜಿ ವಹಿಸುತ್ತೇನೆ ಮತ್ತು ಹಿಂಸಾಚಾರದ ಪ್ರವೃತ್ತಿಯು ಇನ್ನಿಲ್ಲವಾಗಿದೆ."    - ರಾಜೇಶ್ ನಾಯರ್.

ಸಹಜವಾಗಿ ಪ್ರತಿಯೊಬ್ಬರೂ ಸ್ನೇಹಜೀವಿಗಳು. ನಾವು ಸ್ನೇಹಪರರಾಗಿಲ್ಲವಾದರೆ ಅದು ಒತ್ತಡ ಮತ್ತು ಆತಂಕಗಳ ಕಾರಣದಿಂದ. ಧ್ಯಾನವು ಒತ್ತಡವನ್ನು ಕಡಿಮೆ ಮಾಡಿ ನಮ್ಮ ಪರಿಪೂರ್ಣವಾದ ಸಾಮರ್ಥ್ಯಕ್ಕೆ ನಾವು ವಿಕಸನಗೊಳ್ಳಲು ಸಹಾಯ ಮಾಡುತ್ತದೆ. ಸ್ನೇಹವನ್ನು ಮಾಡುವುದು ಮತ್ತು ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ. ಇತರರ ಕಾಳಜಿ ವಹಿಸುವುದು ನಮ್ಮ ಸಹಜ ಸ್ವಭಾವವಾಗಿಬಿಡುತ್ತದೆ.

#2 ನಿಮ್ಮ ಕನಸುಗಳನ್ನು ನನಸಾಗಿಸಿ

" ನನಗೆ ಸಂಗೀತಗಾರನಾಗಬೇಕೆಂಬ ಆಸೆಯಿತ್ತು. ನನಗೆ ಮಹತ್ವಾಕಾಂಕ್ಷೆಗಳಿದ್ದವು ಆದರೆ ನನ್ನ ಸಾಮರ್ಥ್ಯದ ಬಗ್ಗೆ ಸಂಶಯವಿತ್ತು. ನಿಯತವಾದ ಧ್ಯಾನದ ಅಭ್ಯಾಸ ಮಾಡುವುದರ ಮೂಲಕ ‘ನಾನು ಮಾಡಬಲ್ಲೆ’ನೆಂಬ ಆತ್ಮವಿಶ್ವಾಸವು ಬೆಳೆಯಿತು. ಇಂದು ನಾನು ಪ್ರತಿವಾರವೂ ನುಡಿಸುವ ಮ್ಯೂಸಿಕ್ ಬ್ಯಾಂಡ್  ಒಂದರ ಭಾಗವಾಗಿದ್ದೇನೆ." - ವಿನಯ ಭಾರಧ್ವಾಜ

ಯುವಕರಾಗಿ, ನಾವು ನಮ್ಮ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳೊಂದಿಗೆ ಆಕಾಶವನ್ನು ಮುಟ್ಟಲು ಬಯಸುತ್ತೇವೆ.   ಧ್ಯಾನವು ನಮ್ಮ ಈ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಶಕ್ತಿ, ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ತುಂಬುತ್ತದೆ

#3 ಭಿನ್ನವಾದ ಯೋಚನಾಲಹರಿಯನ್ನು ಪಡೆಯಿರಿ

“ಪ್ರತಿದಿನ ನಿಯತವಾದ ಧ್ಯಾನದಿಂದ ನಾನು ನನ್ನಲ್ಲಿರುವ ಹೊಸ  ಪ್ರತಿಭೆಗಳನ್ನು ಕಂಡುಕೊಂಡಿದ್ದೇನೆ. ನನ್ನ ಸೃಜನಾತ್ಮಕ ಸಾಮರ್ಥ್ಯವನ್ನು ಅರಿತುಕೊಂಡು ಭಿನ್ನವಾಗಿ ಯೋಚಿಸುವ ಸಾಮರ್ಥ್ಯವನ್ನು ಪಡೆದಿದ್ದೇನೆ. ಈಗ ಧ್ಯಾನವು ನಾನು ಮಾಡುವ ಪ್ರತಿಯೊಂದು ಚಟುವಟಿಕೆಗೆ ಅನನ್ಯತೆಯನ್ನು ಕೊಡುತ್ತದೆ.”  - ಸವಿತ ಸಾರತಿ

ನಾವು ಧ್ಯಾನ ಮಾಡಿದಾಗ, ನಮ್ಮಲ್ಲಿ ಸೃಜನಾತ್ಮಕತೆಯು ಉದಯಿಸಿ  ಹೊಸದಾಗಿ ಮತ್ತು ಭಿನ್ನವಾಗಿ ಯೋಚಿಸಲು ಮತ್ತು ನಿರಾಯಾಸವಾಗಿ ನಮ್ಮ ಛಾಪನ್ನು ಮೂಡಿಸಲು ಸಮರ್ಥರಾಗುತ್ತೇವೆ.

#4 ಯಾವುದೂ ನಿಮ್ಮನ್ನು ಕದಲಿಸಲು ಸಾಧ್ಯವಿಲ್ಲ

"ಮೊದಲು ನಾನು ಇತರರ ವರ್ತನೆ ಹಾಗೂ ನನ್ನ ಜೀವನದಲ್ಲಿ ಎದುರಾಗುವ ಅಹಿತಕರ ಪರಿಸ್ಥಿತಿಗಳಿಂದ ಬಾಧಿತನಾಗುತ್ತಿದ್ದೆ .  ಆದರೆ ನಿಯಾತವಾಗಿ ಧ್ಯಾನವನ್ನು ಮಾಡುತ್ತಾ ಬಂದಾಗ  ಜೀವನದಲ್ಲಿ ಏನೇ ಬಂದರೂ ಅದನ್ನು ಸುಲಭವಾಗಿ ಸ್ವೀಕಾರ ಮಾಡಲು ಸಾಧ್ಯವಾಗುತ್ತಿದೆ"  - ಶರಣ್ ಕುಮಾರ ಪಾಟೀಲ.

ಯುವಕರಾದ ನಮಗೆ ಅಪ್ರಿಯವಾದ ಪರಿಸ್ಥಿತಿಗಳು ಜೀವನದಲ್ಲಿ ಎದುರಾದಾಗ ಬಾಧೆಯುಂಟಾಗುತ್ತದೆ. ಧ್ಯಾನವು ಆಂತರಿಕ ಶಕ್ತಿ  ಹಾಗೂ ಸ್ವೀಕಾರ ಮನೋಭಾವನೆಯನ್ನು ನೀಡುವುದರ ಮೂಲಕ ಕಷ್ಟದ ಪರಿಸ್ಥಿತಿಯನ್ನೂ ಶಾಂತವಾದ ಮನಸ್ಸಿನಿಂದ ನಿಭಾಯಿಸಲು ಸಹಾಯ ಮಾಡುತ್ತದೆ. ಧ್ಯಾನವು ಜವಾಬ್ದಾರಿಯುತ ಪ್ರಜ್ಞೆಯನ್ನು ಉತ್ತೇಜಿಸಿ ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಾವು ಮಳೆಯನ್ನು ನಿಯಂತ್ರಿಸಲಾಗದಿರಬಹುದು ಆದರೆ ನಮ್ಮ ಹತ್ತಿರ ಛತ್ರಿಯಿದ್ದರೆ ನಾವು ನಿರ್ಭಯವಾಗಿ ಮುನ್ನಡೆಯಬಹುದು. ಕ್ಲಿಷ್ಟಕರ  ಸಮಯದಲ್ಲಿ ಧ್ಯಾನವು ಮಳೆಯಲ್ಲಿ ಛತ್ರಿಯನ್ನು ಹಿಡಿದ ಹಾಗೆ ನಮ್ಮನ್ನು ಕಾಪಾಡುತ್ತದೆ.

#5 ಧ್ಯಾನದಲ್ಲಿ ಉನ್ಮತ್ತರಾಗಿ

" ನಾನು ಏಳು ವರ್ಷಗಳಿಂದ ನಿರಂತರವಾಗಿ ಒಂದರ  ನಂತರ ಮತ್ತೊಂದು ಸಿಗರೇಟ್ ಸೇದುತ್ತಿದ್ದೆ. ನನ್ನ ಸ್ನೇಹಿತನೊಬ್ಬ ಧ್ಯಾನವನ್ನು ಕಲಿಯಲು ಸಲಹೆ ನೀಡಿದನು.  ನಾನು ಸಹಜ ಸಮಾಧಿ ಧ್ಯಾನದ ನಿಯತವಾದ ಅಭ್ಯಾಸದ ನಂತರ ಸಿಗರೇಟ್ ಸೇದುವುದನ್ನು ಸಂಪೂರ್ಣವಾಗಿ ಬಿಟ್ಟಿದ್ದೇನೆ. ನನಗೆ ಸಿಗರೇಟು ಸೇದಿದ ನಂತರ ಸಿಗುತ್ತಿದ್ದ ಅನುಭೂತಿಯೇ ಈಗ ಪ್ರತಿದಿನದ ಧ್ಯಾನದ ನಂತರ ಸಿಗುತ್ತದೆ."  - ಗಿರೀಶ್ .ಎಂ

ಧೂಮಪಾನವನ್ನು ಕಡಿಮೆಗೊಳಿಸಲು ಮತ್ತು ಶಾಶ್ವತವಾಗಿ ತ್ಯಜಿಸಲು ಧ್ಯಾನವು ಸಹಾಯ ಮಾಡುತ್ತದೆ. ಆರೋಗ್ಯವನ್ನು ಅಥವಾ ಅರಿವನ್ನು ಕಳೆದುಕೊಳ್ಳದೇ ಸಹಜವಾಗಿ ಉನ್ಮತ್ತರಾಗಲು ಧ್ಯಾನವು ಸಹಾಯಕವಾಗುತ್ತದೆ. 
ಧ್ಯಾನವು ಧೂಮಪಾನ ಅಥವಾ ಮದ್ಯಸೇವನೆಯ ವ್ಯಾಮೋಹ ಹಾಗೂ ಇತರ ದುಶ್ಚಟಗಳ ಹಂಬಲದಿಂದ ಮನಸ್ಸನ್ನು ಮುಕ್ತಗೊಳಿಸುತ್ತದೆ. ಹಾಗಾಗಿ, ಧೂಮಪಾನವನ್ನು ನಿಲ್ಲಿಸಿ, ಜೀವನವನ್ನು ಪ್ರಾರಂಭಿಸಿ.

#6 ಶಕ್ತಿ ಮತ್ತು ಚೈತನ್ಯವನ್ನು ಸರಿಯಾದ ಮಾರ್ಗದಲ್ಲಿ ಹರಿಸಿ

"ನಾನು ಧ್ಯಾನವನ್ನು ಅಭ್ಯಾಸ ಮಾಡಲು ಆರಂಭಿಸಿದಾಗಿನಿಂದ ನನಗೆ ಹೆಚ್ಚಿನ ಶಕ್ತಿ ಮತ್ತು ಉತ್ಸಾಹದ ಅನುಭವವಾಗಿದೆ. ನನ್ನ ಹೆಚ್ಚಿನ ಸಮಯವನ್ನು ಸೃಜನಾತ್ಮಕ ಕಲೆಗಳಲ್ಲಿ ಹಾಗೂ ಕೆಲವು ಸೇವಾ ಕಾರ್ಯಗಳಲ್ಲಿ ತೊಡಗಿಸುತ್ತೇನೆ." ಸುಷ್ಮ ಜಯರಾಮ್

ಯುವಕರು ಶಕ್ತಿ, ಉತ್ಸಾಹ ಹಾಗೂ ಸೃಜನಾತ್ಮಕತೆಯ ಸಾಗರ. ಧ್ಯಾನವು ನಮ್ಮ ಸಾಮರ್ಥ್ಯದ ಆಳವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ನಾವು ಇನ್ನೂ ಹೆಚ್ಚು ನವೀನ ಹಾಗೂ ಕ್ರಿಯಾತ್ಮಕರಾಗುವೆವು. ನಮ್ಮ ಚೈತನ್ಯವನ್ನು ಸೃಜನಾತ್ಮಕ ಮತ್ತು ಸಕಾರಾತ್ಮಕವಾಗಿ ಉಪಯೋಗಿಸಲು ಶಕ್ತರಾಗುವೆವು.

#7 ನಿಮ್ಮ  ಪೋಷಕರೊಂದಿಗೆ ಸಾಮರಸ್ಯವನ್ನು ಸಾಧಿಸಿ

"ನನ್ನ ಪೋಷಕರೊಂದಿಗೆ ಒಂದು ಅಗಲಿಸಲಾಗದಂತಹ ಸಂಬಂಧವನ್ನು ಬೆಳೆಸಲು ಧ್ಯಾನವು ನನಗೆ ಸಹಾಯ ಮಾಡಿತು. ಈಗ ನಾವು ನಮ್ಮ ಸಂತೋಷ ಹಾಗೂ ಸಮಸ್ಯೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತೇವೆ. ಜೊತೆಯಲ್ಲಿ ಧ್ಯಾನ ಮಾಡುವುದರಿಂದ ನಮ್ಮ ಸಂಬಂಧಗಳು ಇನ್ನೂ ಹೆಚ್ಚು ಮಹತ್ವವನ್ನು ಪಡೆದಿವೆ" - ಅಭಿಷೇಕ್ ದಾವರ್

ನಾವು ಧ್ಯಾನ ಮಾಡಿದಾಗ ನಮ್ಮ ಪೋಷಕರೊಂದಿಗೆ ಶಾಂತಿಯುತವಾಗಿ ಹಾಗೂ ಯುಕ್ತಿಯುತವಾಗಿ ವ್ಯವಹರಿಸಬಹುದು. ಇದು ನಮ್ಮ ನಡುವಿನ ಸಂವಹನದ ಅಂತರವನ್ನು ಕಡಿಮೆ ಮಾಡುತ್ತದೆ. ನಮ್ಮ ಇಷ್ಟಾರ್ಥಗಳು ಮತ್ತು ಪೋಷಕರ ಸಲಹೆಗಳ ನಡುವೆ ಸಮಾನತೆಯನ್ನು ಕಾಪಾಡಿಕೊಳ್ಳಬಹುದಾದಂತಹ ಆಯ್ಕೆಗಳನ್ನು ಮಾಡುವ ಅರಿವು ಮತ್ತು ಯುಕ್ತಿಯನ್ನು ಧ್ಯಾನವು ನೀಡಬಲ್ಲದು

ಶ್ರೀ ಶ್ರೀ ರವಿಶಂಕರರ ಜ್ಞಾನ ಪ್ರವಚನಗಳಿಂದ ಪ್ರೇರಿತ 

ಶ್ರೇಯಾ ಚುಗ್ ಮತ್ತು ರಾಜೇಂದ್ರ ಸಿಂಗ್ ರವರ ಸಲಹೆಗಳನ್ನಾಧಾರಿತ.
ಶ್ರೇಯಾ ಮತ್ತು ರಾಜೇಂದ್ರ ಜೀವನ ಕಲೆಯ ಯುವಕರ ಶಿಬಿರದ ಶಿಕ್ಷಕರಾಗಿದ್ದಾರೆ ಹಾಗೂ ವಿಶ್ವದಾದ್ಯಂತ ಸಾವಿರಾರು ಯುವಕರಿಗೆ ಧ್ಯಾನವನ್ನು ಕಲಿಸುವ ಮೂಲಕ ಅವರ ಜೀವನವನ್ನು ಪರಿವರ್ತನೆಗೊಳಿಸಿದ್ದಾರೆ.