ಧ್ಯಾನ, ನಿದ್ದೆ ಮತ್ತು ಕನಸುಗಳ ನಡುವಿನ ಸಂಬಂಧ

ಪ್ರಶ್ನೆ : ಧ್ಯಾನದ ಸಮಯದಲ್ಲಿ ನನ್ನ ಮನಸ್ಸು ಬಹಳ ಅಲೆಯುತ್ತದೆ. ನನ್ನ ಮನಸ್ಸು ಯಾವಾಗ ನೆಲೆನಿಲ್ಲುತ್ತದೆ?

ಶ್ರೀ ಶ್ರೀ ರವಿಶಂಕರ್ : ಮನಸ್ಸು ಅಲೆಯುವುದಿಲ್ಲ. ಅದು ಇನ್ನಷ್ಟಕ್ಕಾಗಿ, ಮತ್ತಷ್ಟಕ್ಕಾಗಿ ಹುಡುಕುತ್ತಿದೆ. ಇನ್ನೂ ಹೆಚ್ಚು ಎಂಬ ಹುಡುಕಾಟದ ಪ್ರಕ್ರಿಯೆಯಿಂದ ಪರಮಾತ್ಮದೆಡೆಗೆ ತೆರಳುತ್ತೇವೆ. ಆತ್ಮದ ಒಂದು ಇಣುಕುನೋಟ ಸಾಕು, ನಿಮ್ಮನ್ನು ಮತ್ತೆ ಕರೆತರಲು. ಮನಸ್ಸು ಅಲೆಯುತ್ತಿದೆ ಎಂಬ ಅರಿವಾದರೂ ನಿಮಗಿದೆಯಲ್ಲ! ಇದೇ ಒಂದು ದೊಡ್ಡ ವಿಷಯ. ಬಹುತೇಕ ಜನರಿಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ. ಇದನ್ನು ತಿಳಿದುಕೊಂಡಿದ್ದೀರಿ ಎಂದರೆ ಮನಸ್ಸು ಮರಳಿ ಬರುತ್ತದೆ ಎಂದರ್ಥ.

 ಬಯಕೆಗಳು ನಿಮ್ಮನ್ನು ಆತ್ಮದಿಂದ ದೂರಕ್ಕೆ ಕೊಂಡೊಯ್ಯುತ್ತವೆ. ಸಣ್ಣ ಬಯಕೆಗಳು ನಿಮ್ಮ ಧ್ಯಾನವನ್ನು ಕದಡುತ್ತವೆ. ಧ್ಯಾನ ಮಾಡಲು ನೀವು ಕುಳಿತಾಗ, ನಿಮಗೇನೂ ಈಗ ಬೇಕಿಲ್ಲ ಎಂದು ನಿಮಗೆ ಹೇಳಿಕೊಳ್ಳಿ. ಮತ್ತೆ ನೀವೇನೂ ಮಾಡುವುದಿಲ್ಲ ಎಂದು ನಿಮಗೆ ಹೇಳಿಕೊಳ್ಳಿ. ಮೂರನೆಯ ಧ್ಯಾನದ ಸೂತ್ರವೆಂದರೆ ನೀವು ಯಾರೂ ಅಲ್ಲ. ನೀವು ಧ್ಯಾನ ಮಾಡಬೇಕು ಎಂದುಕೊಳ್ಳಬೇಕು. ಯಾವ ರೀತಿಯ ಪ್ರಯತ್ನವನ್ನೂ ಮಾಡಬೇಕಿಲ್ಲ. ಸುಮ್ಮನೆ ಕುಳಿತು ಖಾಲಿ ಮತ್ತು ಟೊಳ್ಳಾಗಿಬಿಡಿ. ಈ ಮೂರು ಸೂತ್ರಗಳು ಬಹಳ ಮುಖ್ಯ.

ಪ್ರಶ್ನೆ : ಧ್ಯಾನ ಮಾಡುವಾಗ ಕೆಲವು ರೂಪಗಳನ್ನು ಕಾಣುತ್ತೇನೆ. ಪರವಾಗಿಲ್ಲವೆ?

ಶ್ರೀ ಶ್ರೀ ರವಿಶಂಕರ್: ಅದರ ಮೇಲೆ ಹೆಚ್ಚು ಗಮನವನ್ನು ಕೊಡಬೇಡಿ. ಅದೊಂದು ಅನುಭವವಷ್ಟೆ. ಧ್ಯಾನ ಮಾಡುತ್ತಿರುವಾಗ ನೀವೇನನ್ನೋ ಕೇಳಿಸಿಕೊಳ್ಳಬಹುದು, ಕೆಲವು ರೂಪಗಳನ್ನು, ದೃಶ್ಯಗಳನ್ನು ಕಾಣಬಹುದು. ಆದರೆ ಇವೆಲ್ಲವೂ ಬಂದು ಹೋಗುವಂತವು. ಇದೆಲ್ಲವೂ ಒತ್ತಡದ ಬಿಡುಗಡೆಯ ಒಂದು ರೂಪ.

ಪ್ರಶ್ನೆ : ಕೆಲವೊಮ್ಮೆ ಧ್ಯಾನ ಮಾಡುತ್ತಲಿರುವಾಗ ನಾನು ನಿದ್ದೆ ಮಾಡುತ್ತೇನೆ. ಪರವಾಗಿಲ್ಲವೆ?

ಶ್ರೀ ಶ್ರೀ ರವಿಶಂಕರ್ : ಧ್ಯಾನ ಮಾಡುತ್ತಲಿರುವಾಗ ನಿದ್ದೆ ಮಾಡಿದರೆ ಪರವಾಗಿಲ್ಲ. ನಿದ್ದೆ ಪೂರ್ತಿಯಾದ ನಂತರ ಧ್ಯಾನ ಮಾಡಬಹುದು.

ಪ್ರಶ್ನೆ : ಧ್ಯಾನ, ನಿದ್ದೆ ಮತ್ತು ಕನಸುಗಳ ನಡುವಿನ ಸಂಬಂಧವೇನು?

ಶ್ರೀ ಶ್ರೀ ರವಿಶಂಕರ್ : ನೀವು ಜಾಗೃತರಾಗಿದ್ದಾಗ ಮತ್ತು ವಿಶ್ರಮಿತರಾಗಿದ್ದಾಗ ಧ್ಯಾನ ಮಾಡುತ್ತೀರಿ. ಆಳವಾದ ನಿದ್ದೆಯಲ್ಲಿ ನಿಮಗೆ ಯಾವುದರ ಅರಿವೂ ಇರುವುದಿಲ್ಲ. ನೀವು ಎಚ್ಚೆತ್ತುಕೊಂಡ ನಂತರವೇ ನೀವು ಮಲಗಿದ್ದಿರಿ ಎಂದು ನಿಮಗೆ ತಿಳಿಯುವುದು. ಒಂದು ಕನಸು ಕನಸೆ. ನೀವೀಗಾಗಲೇ ಪಡೆದ ಅನುಭವಗಳು ಮತ್ತೆ ನಿಮ್ಮ ಮನಸ್ಸಿನಲ್ಲಿ ನಿಮ್ಮ ಚೈತನ್ಯದಲ್ಲಿ ಪ್ರತಿಫಲಿಸುತ್ತವೆ. ಆಗ ಅದು ಕನಸು.

 “ಕ್ವೆಶ್ಚನ್ ಬಾಸ್ಕೆಟ್”ಎಂಬ ಪುಸ್ತಕದಲ್ಲಿ ಮೊದಲು ಪ್ರಕಟವಾಗಿತ್ತು.