ಯೋಗಭ್ಯಾಸ ಮಾಡಿ, ತಾಯ್ತನವನ್ನು ಸಂಭ್ರಮಿಸಿ

ಜನನ ಎನ್ನುವುದು ಮಗುವಿನ ಹುಟ್ಟಿಗಷ್ಟೇ ಅನ್ವಯಿಸುವುದಿಲ್ಲ, ಅದು ತಾಯಿಯನ್ನೂ ರೂಪಿಸುತ್ತದೆ ಎನ್ನುವುದು ತಾರಿಣಿ ಎಂಬ ಒಂದು ವರ್ಷದ ಮುದ್ದಾದ ಮಗುವಿನ ತಾಯಿ ಮೇಘನಾರ ಅನಿಸಿಕೆ. ತಾರಿಣಿ ದುರ್ಗಾದೇವಿಯ ಹೆಸರುಗಳಲ್ಲೊಂದು. ಇಲ್ಲಿ ಮೇಘನಾ ಹೀಗೆ ಹೊಸ ಜನ್ಮತಳೆದ ತಾಯಿಯಾಗಿ ತಮ್ಮ ಅನುಭವವನ್ನು ಶ್ರದ್ಧಾ ಶರ್ಮಾರೊಡನೆ ಹಂಚಿಕೊಂಡಿದ್ದಾರೆ.

ನನ್ನ ನವಜಾತ ಹೆಣ್ಣುಮಗುವಿನ ಕಣ್ಣುಗಳಲ್ಲಿ ದೃಷ್ಠಿ ನೆಟ್ಟಾಗ ನನಗೆ ಮತ್ತೊಮ್ಮೆ ಹುಟ್ಟಿಬಂದಂತೆ ಅನ್ನಿಸಿತು. ಅವಳ ಮುಖದಲ್ಲಿದ್ದ ಮುಗ್ಧತೆ, ಆಶಾಭಾವ, ಬೆಳಕು ಅವಳ ಮೂಲಕ ನನ್ನನ್ನು ಪ್ರತಿಬಿಂಬಿಸುತ್ತಿದ್ದವು. ಮಹಿಳೆಯೊಬ್ಬಳ ಬದುಕಿನಲ್ಲಿ ತಾಯ್ತನ ವು ಒಂದು ಅತ್ಯಂತ ಸುಂದರವಾದ ಹಾಗೂ ಸಂತೃಪ್ತಿಯ ಕ್ಷಣ. ನಾನೂ ನಿಜಕ್ಕೂ ಈ ಪಯಣವನ್ನು ಆನಂದಿಸುತ್ತಿದ್ದೇನೆ.

ಒಂದು ಕ್ಷಿಪ್ರ ಬದಲಾವಣೆ

ತಾರಿಣಿಯ ಹುಟ್ಟು ಎಲ್ಲವನ್ನೂ ಇದ್ದಕ್ಕಿದ್ದಂತೆ ಬದಲಾಯಿಸಿಬಿಟ್ಟಿತು. ಒಟ್ಟಿನಲ್ಲಿ ಇದು ೩೬೦  ಬದಲಾವಣೆ. ನಾನು, ಕೇವಲ ನಾನಾಗಿರಲಿಲ್ಲ. ಅದಕ್ಕೂ ಹೆಚ್ಚಿನದೇನೋ ಇತ್ತು, ನನಗೆ ನಾನೇ ವಿಸ್ತಾರಗೊಂಡ ಅನುಭವವಾಗುತ್ತಿತ್ತು. ಜನರು ಹೆಚ್ಚಾಗಿ ಮಗುವಿನ ಕಾಳಜಿಯನ್ನು ತೆಗೆದುಕೊಳ್ಳತೊಡಗಿದಂತೆ ಅವರ ಗಮನವೂ ಕೂಡ ಅವಳ ಮೇಲೆ ಹರಿಯತೊಡಗಿತು. ಆರಂಭದ ೪೦ ದಿನಗಳು ತುಂಬಾ ಕಷ್ಟಕರವಾಗಿದ್ದವು. ಯಾಕೆಂದರೆ, ಆ ಅವಧಿಯಲ್ಲಿ ನಾನು ದೈಹಿಕ ಹಾಗೂ ಮಾನಸಿಕ ಎರಡೂ ರೀತಿಯಿಂದ ಅಶಕ್ತಳಾಗಿದ್ದೆ. ಮಗುವಿನ ಹಾಗೆಯೇ ನನಗೂ ಅದೇ ಪ್ರೀತಿ, ಕಾಳಜಿ ಬೇಕೆಂದು ಬಯಸುತ್ತಿದ್ದೆ. ಈ ಅವಧಿಯಲ್ಲಿ, ಅಷ್ಟೇನೂ ಸಬಲರಲ್ಲದ ಕೆಲವು ಮಹಿಳೆಯರು ಚಿಕ್ಕ ಚಿಕ್ಕದಕ್ಕೂ ಸಿಡಿಮಿಡಿಗೊಳ್ಳುತ್ತಾರೆ. ತಾವೊಂದೇ ದೈಹಿಕವಾಗಿ ತೊಂದರೆ ಅನುಭವಿಸುತ್ತಿದ್ದೇವೆಂದು ಭಾವಿಸುತ್ತಾರೆ. ತಮ್ಮ ಬದುಕಿನಲ್ಲಾದ ಈ ಹೊಸ ಬದಲಾವಣೆಯನ್ನು ಸ್ವೀಕರಿಸಲು ಅವರು ಅಸಮರ್ಥರಾಗಿರುತ್ತಾರೆ.

ಯೋಗದಿಂದ ಶೀಘ್ರವಾಗಿ ಚೇತರಿಕೆ:

ನನ್ನದು ಸಿಜೇರಿಯನ್ ಹೆರಿಗೆ. ದೈಹಿಕ ನೋವು ಇದ್ದರೂ ಯೋಗ ಮತ್ತು ಧ್ಯಾನಗಳು ನನ್ನ ಮನಸ್ಸಿಗೆ ವಿಶ್ರಾಂತಿ ನೀಡುವಲ್ಲಿ ಹಾಗೂ ನಾನು ಆಂತರ್ಯದಲ್ಲಿ ಸ್ಥಿರತೆಯನ್ನು ಹೊಂದುವಲ್ಲಿ ಮಹತ್ವದ ಪಾತ್ರ ವಹಿಸಿದವು. ಇದರಿಂದಾಗಿ, ನಾನು ಒಳಗಾಗಿದ್ದ ಭಾವನೆಗಳನ್ನು ಸಮರ್ಥವಾಗಿ ನಿರ್ವಹಿಸಲು ಹಾಗೂ ನನ್ನ ಸ್ವಂತದ ಮತ್ತು ಮಗುವಿನ ಕಾಳಜಿಯನ್ನು ತೆಗೆದುಕೊಳ್ಳಲು ಬೇಕಾದ ಶಕ್ತಿಯನ್ನು ಬೆಳೆಸಿಕೊಳ್ಳಲು ಬಹಳ ಸಹಾಯವಾಯಿತು. ಸಾಧಾರಣವಾಗಿ ವೈದ್ಯರು ಹೆರಿಗೆಯಾದ ನಂತರ ಮೊದಲ ಆರು ತಿಂಗಳುಗಳ ಕಾಲ ಯಾವುದೇ ಯೋಗಾಸನಗಳಿಂದ ದೂರವಿರುವುದೇ ಒಳಿತು ಎಂದು ಸಲಹೆ ನೀಡುತ್ತಾರೆ. ಅದರಂತೆ, ನನಗೆ ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾದ ಕೂಡಲೇ ನಾನು ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದನ್ನು ಆರಂಭಿಸಿದೆ. ಹೀಗೇ ಒರಗಿಕೊಂಡಿದ್ದಾಗಲೂ ನಾನು ಕೆಲಕಾಲ ಧ್ಯಾನ ಮಾಡುತ್ತಿದ್ದೆ ಅಥವಾ ಯೋಗನಿದ್ರೆಯನ್ನು ಅಭ್ಯಾಸ ಮಾಡುತ್ತಿದ್ದೆ. ಹೆರಿಗೆಯ ನಂತರ, ಮೊದಲ ಆರು ತಿಂಗಳಿನುದ್ದಕ್ಕೂ ನಾನು ನಾಡಿಶೋಧನ ಪ್ರಾಣಾಯಾಮ ಹಾಗೂ ಮುದ್ರಾ ಪ್ರಾಣಾಯಾಮಗಳನ್ನು ಮುಂದುವರೆಸಿದೆ. ಇವೆಲ್ಲದರಿಂದ ನಾನು ಶೀಘ್ರವಾಗಿ ಹಾಗೂ ಉತ್ತಮವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಸುಮಾರು ಆರು ತಿಂಗಳುಗಳ ನಂತರ ನಾನು ಕೆಲವು ಲಘುವಾದ ಯೋಗಾಸನಗಳನ್ನು ಮಾಡತೊಡಗಿದೆ. ನಂತರ ನಿಧಾನವಾಗಿ ಪದ್ಮ ಸಾಧನೆ ಹಾಗೂ ಸೂರ್ಯ ನಮಸ್ಕಾರಗಳನ್ನು ಮತ್ತೆ ಮಾಡಲು ಆರಂಭಿಸಿದೆ.

ಯೋಗವು ನಿಮ್ಮ ಹಳೆಯ ಮತ್ತು ಹೊಸ ಜೀವನದ ನಡುವೆ ಸಮತೋಲನ ಸಾಧಿಸುವಲ್ಲಿ ಸಹಾಯಕಾರಿ.

ಮಾತೃತ್ವ ಅಥವಾ ತಾಯ್ತನವು ಹೊಸ ಜೀವನವೊಂದರ ಆರಂಭ. ಮಹಿಳೆಯರು ಮಗು ಹುಟ್ಟಿದ ಮೇಲೆ ತಮಗೆ ಸ್ವಂತಕ್ಕಾಗಿ ವೇಳೆಯೇ ಸಿಗುವುದಿಲ್ಲವೆಂದು ಹಾಗೂ ತಾವು ತಮ್ಮ ‘ಹಳೆಯ’ ಬದುಕನ್ನು ಕಳೆದುಕೊಂಡಂತೆ ಭಾಸವಾಗುವುದೆಂದೂ ದೂರುವುದನ್ನು ಆಗಾಗ್ಗೆ ಕೇಳುತ್ತೇನೆ. ಹಲವಾರು ಬದಲಾವಣೆಗಳಾಗಿದ್ದರೂ ಈಗಲೂ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬಹುದೆಂದು ನಾನು ಹೇಳಲು ಇಚ್ಛಿಸುತ್ತೇನೆ. ಯೋಗದಿಂದ ಇದು ಸಾಧ್ಯ! ಈಗ ಕೆಲವರು ಕೇಳಬಹುದು, “ಇದೆಲ್ಲದರ ನಡುವೆ ಯೋಗಭ್ಯಾಸ ಮಾಡಲು ಸಮಯವೆಲ್ಲಿದೆ?” ಆದರೆ ನನಗೆ ಹೆರಿಗೆಯ ನಂತರ ನಾನು ಮಾಡುತ್ತಿದ್ದ ಯೋಗಾಭ್ಯಾಸದಿಂದಲೇ ಉಳಿದ ಕೆಲಸಗಳಿಗೆ ಸಮಯ ಮಾಡಿಕೊಳ್ಳಲು ಸಾಧ್ಯವಾಯಿತು. ಈಗ ನಾನು ಉದ್ಯೋಗ, ಮನೆ ಹಾಗೂ ಮಗು ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗುತ್ತಿದೆ. ನನ್ನ ನಿತ್ಯದ ಯೋಗಾಭ್ಯಾಸವನ್ನೂಮಾಡಲು ಸಮಯ ಸಿಗುತ್ತದೆ. ಮನೆ ತುಂಬ ಮಗಳ ಹಿಂದೆ ಓಡುವುದು, ಆಟ ಆಡುವುದು ಹಾಗೂ ಅವಳನ್ನು ನನ್ನ ಮೊಣಕಾಲು ಮಂಡಿಗಳ ಮೇಲೆ ಕುಳ್ಳಿರಿಸಿಕೊಳ್ಳುವುದು ಇತ್ಯಾದಿಗಳಿಂದ ಯೋಗಾಭ್ಯಾಸಕ್ಕೂ ಪೂರ್ವದಲ್ಲಿ ಶರೀರವನ್ನು ಸಿದ್ಧಗೊಳಿಸುವ ಕ್ರಿಯೆ ಆಗಿಬಿಡುತ್ತದೆ! ನಂತರ ಅವಳು ಮಲಗಿದಾಗ ನಾನು ಸೂರ್ಯನಮಸ್ಕಾರ ಮತ್ತು ಪದ್ಮ ಸಾಧನೆಗಳಲ್ಲಿ ತೊಡಗುತ್ತೇನೆ. ಕೆಲವೊಮ್ಮೆ ಇವುಗಳನ್ನು ಮಾಡಲು ಆಗದ ಪರಿಸ್ಥಿತಿ ಉಂಟಾದರೂ ನಾನು ಅಪರಾಧೀ ಪ್ರಜ್ಞೆ ಅಥವಾ ಬೇಸರವನ್ನು ಹೊಂದುವುದಿಲ್ಲ. ಪ್ರತಿ ದಿನವೂ ಇನ್ನೊಂದು ದಿನಕ್ಕಿಂತ ಬೇರೆಯದೇ. ಆದರೆ, ನಾನು ಸಾಧ್ಯವಾದಷ್ಟೂ ತಪ್ಪದೇ ಅಭ್ಯಾಸ ಮಾಡಲು ಪ್ರಯತ್ನಿಸುತ್ತೇನೆ.

ನಾನು ತಪ್ಪದೇ ಮಾಡುವ ಒಂದು ಕ್ರಿಯೆಯೆಂದರೆ- ಸುದರ್ಶನ ಕ್ರಿಯೆ. ಇದಕ್ಕೆ ಕೇವಲ ಇಪ್ಪತ್ತು ನಿಮಿಷಗಳ ಕಾಲಾವಧಿ ಸಾಕು ಮತ್ತು ಅದು ನನಗೆ ತಾರಿಣಿ ಮಲಗಿದ್ದಾಗ ಸಿಗುತ್ತದೆ. ಹಗಲು ವೇಳೆ ಮಾಡುವ ಈ ಎಲ್ಲ ಅಭ್ಯಾಸಗಳು ನನಗೆ ತಾಜಾತನದ ಅನುಭವವನ್ನು ಹಾಗೂ ಚೈತನ್ಯವನ್ನು ನೀಡುತ್ತವೆ. ತಾಯಿಯಾಗಿದ್ದಾಗ ಪ್ರತಿದಿನ ಒಂದು ಗಂಟೆಯ ಕಾಲಾವಧಿಯನ್ನು ಯೋಗಾಭ್ಯಾಸಕ್ಕಾಗಿ ಮೀಸಲಿಡುವುದು ಕಷ್ಟ. ಹಾಗಾಗಿ ನಾನು ಸಮಯ ಸಿಕ್ಕಾಗಲೇ ಈ ಅಭ್ಯಾಸದಲ್ಲಿ ತೊಡಗುತ್ತೇನೆ. ಯೋಗ ಮತ್ತು ಧ್ಯಾನದಿಂದ ನಾನು ನನ್ನ ಆರೋಗ್ಯದ ಕುರಿತು ಕಾಳಜಿ ವಹಿಸಲು ಹಾಗೂ ಮನಸ್ಸಿನ ಶಾಂತತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ.

ಹೆರಿಗೆಯ ನಂತರ ಮೈ ತೂಕ ಹೆಚ್ಚಾಗುವುದಕ್ಕೆ ಯೋಗದ ಸಹಾಯದಿಂದ ವಿದಾಯ ಹೇಳಿ

ಹೆಚ್ಚಿನ ಮಹಿಳೆಯರಿಗೆ ಗರ್ಭಾವಸ್ಥೆ ಹಾಗೂ ಅದರ ನಂತರದ ಪರಿಣಾಮಗಳಾದ ತೂಕ ವೃದ್ಧಿ, ಸ್ನಾಯುಗಳ ಜೋಲುವಿಕೆ, ಸಂಧಿ ನೋವು, ಬೆನ್ನು ನೋವು, ಸುಸ್ತು, ರಸದೂತಗಳ (hormones) ಏರುಪೇರು, ಅಧಿಕ ರಕ್ತದೊತ್ತಡ ಹಾಗೂ ಕೆಲವು ಪೌಷ್ಟಿಕಾಂಶಗಳ ಕೊರತೆಗಳಿಂದಾಗಿ ಅಶಕ್ತತೆ ಇತ್ಯಾದಿಗಳ ಜೊತೆ ಏಗುವುದು ಕಷ್ಟವಾಗುತ್ತದೆ. ನನಗೂ ಕೂಡ ಮೊದಲಿನ ಮೈಕಟ್ಟನ್ನು ಪಡೆಯುವುದು ಹಾಗೂ ಹೊಟ್ಟೆಯ ಭಾಗದಲ್ಲಿ ಹೆಚ್ಚಾಗಿದ್ದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ಬೊಜ್ಜು ನನ್ನ ಮಂಡಿ ಹಾಗೂ ಕಾಲುಗಳ ಮೇಲೆ ಒತ್ತಡ ಹಾಕಲಾರಂಭಿಸಿತು. ನಿತ್ಯ ಯೋಗಾಭ್ಯಾಸದಿಂದ (ಪದ್ಮ ಸಾಧನೆ ಹಾಗೂ ಸೂರ್ಯ ನಮಸ್ಕಾರ) ಹೆರಿಗೆಯಾಗಿ ಆರು ತಿಂಗಳುಗಳ ನಂತರ ನಾನು ತೂಕ ಕಡಿಮೆ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದೆ!  ಜೊತೆಗೆ, ನಾನು ಹೇಳುವುದೆಂದರೆ, ಗರ್ಭ ಧರಿಸುವುದಕ್ಕೂ ಕೆಲಕಾಲ ಮೊದಲು ನಾನು ನಿತ್ಯ ಯೋಗಾಭ್ಯಾಸವನ್ನು ಆರಂಭಿಸಿದ ಕಾರಣ, ಗರ್ಭಾವಸ್ಥೆಯಲ್ಲಾಗಲೀ ಅಥವಾ ಹೆರಿಗೆಯ ನಂತರವಾಗಲೀ ನನಗೆ ಹೆಚ್ಚು ಆರೋಗ್ಯದ ಸಮಸ್ಯೆಗಳು ತಲೆದೋರಲಿಲ್ಲ. ಯೋಗ ಮತ್ತು ಧ್ಯಾನಗಳಿಂದಾಗಿ, ಸಿಜೇರಿಯನ್ ಶಸ್ತ್ರಕ್ರಿಯೆಯ ಹೊರತಾಗಿಯೂ ನನ್ನ ಬದುಕು ಸುಲಭ ಸಾಧ್ಯವಾಗಿದೆ.

ಮರುಕಳಿಸಿದ ಬಾಲ್ಯ

ಮಾತೃತ್ವ ಅಥವಾ ತಾಯ್ತನವೆಂದರೆ ಸಂಭ್ರಮಿಸುವ, ಆನಂದಿಸುವ ಸಂಗತಿ. ಆರೋಗ್ಯವಂತ ಶರೀರ ಹಾಗೂ ಪ್ರಶಾಂತ ಮನಃಸ್ಥಿತಿಯ ಜೊತೆಗೆ ಪ್ರಸ್ತುತ ಕ್ಷಣದಲ್ಲಿ, ವರ್ತಮಾನದಲ್ಲಿ ಬದುಕುತ್ತಿದ್ದಾಗ ಮಾತ್ರ ಹೀಗೆ ಆನಂದಿಸಲು ಸಾಧ್ಯ.  ಯೋಗ ಮತ್ತು ಧ್ಯಾನಗಳನ್ನು ನಿಮ್ಮ ದೈನಂದಿನ ಬದುಕಿನ ಅಂಗವನ್ನಾಗಿ ಮಾಡಿಕೊಂಡಾಗಲಷ್ಟೇ ನಿಮ್ಮ ಶರೀರ ಹಾಗೂ ಮಗುವಿನ ಅಗತ್ಯತೆಗಳ ಕುರಿತಂತೆ ಸೂಕ್ಷ್ಮ ಸಂವೇದನೆ ಹೊಂದಲು ಸಾಧ್ಯ. ತಾರಿಣಿಗೆ ಯಾವಾಗ, ಏನು, ಎಷ್ಟು ಅಗತ್ಯವಿದೆ ಎನ್ನುವುದನ್ನು ನಾನೀಗ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅವಳು ಆಗಾಗ ಮಾಡುವ ತುಂಟಾಟಗಳನ್ನು ಅವಳ ಹಾವಭಾವಗಳನ್ನು, ನಗುವನ್ನು ನೋಡಿ ಆನಂದಿಸುತ್ತೇನೆ. ಪ್ರತಿಯೊಬ್ಬ ತಾಯಿಯೂ ಈ ಹಂತವನ್ನು ದಾಟಿಯೇ ಬರುತ್ತಾಳೆ. ಆದರೆ, ನೀವು ಧ್ಯಾನ ಮಾಡುತ್ತಿದ್ದರೆ ಅಥವಾ ಇನ್ನಿತರ ಯಾವುದೇ ತರಹದ ಯೋಗವನ್ನು ಅಭ್ಯಾಸ ಮಾಡುತ್ತಿದ್ದರೆ, ಈ ಆನಂದದ ತೀವ್ರತೆ ಇನ್ನೂ ಹೆಚ್ಚಿನದಾಗಿರುತ್ತದೆ. ನಿಮ್ಮೊಳಗಿನ ಕೋಮಲ ಭಾವನೆ ಹಾಗೂ ಮುಗ್ಧತೆಗಳೊಡನೆ ಮತ್ತೆ ಸಂಪರ್ಕ ಸಾಧಿಸಲು, ನಿಮ್ಮ ಬಾಲ್ಯವನ್ನು ಮತ್ತೆ ಜೀವಿಸಲು ನಿಜಕ್ಕೂ ಸಾಧ್ಯವಾಗುತ್ತದೆ. ಇದು ಒಂದು ರೀತಿಯಲ್ಲಿ, ನಿಮ್ಮ ಮಗುವಿನ ಜೊತೆಗೆ ಪ್ರತಿದಿನ ನೀವೂ ಬೆಳೆಯುವಂತಹ ಅನುಭವ!