ಸಹಜ ಸಮಾಧಿ ಧ್ಯಾನ

ಆಳವಾದ ಆನಂದದ ಕ್ಷಣಗಳಲ್ಲಿ ಅಥವಾ ಯಾವುದಾದರೂ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತಲ್ಲೀನರಾದಾಗ ಒಂದು ಕ್ಷಣ ಮನಸ್ಸು ಅತ್ಯಂತ ಹಗುರ ಹಾಗೂ ಆರಾಮವಾಗುವ ಕ್ಷಣಗಳಲ್ಲಿ ಪ್ರತಿಯೊಬ್ಬರೂ ಧ್ಯಾನದ ಅನುಭವವನ್ನು ಪಡೆದಿರುತ್ತಾರೆ. ಇಂತಹ ಕ್ಷಣಗಳನ್ನು ನಾವು ಬಯಸಿದಾಗಲೆಲ್ಲ ಮರುಕಳಿಸಲಾಗುವುದಿಲ್ಲ. ಆದರೆ ಸಹಜ ಸಮಾಧಿ ಧ್ಯಾನವು ಈ ಆನಂದವನ್ನು ಹೇಗೆ ಅನುಭವಿಸಬಹುದೆಂದು ಕಲಿಸಿಕೊಡುತ್ತದೆ. ಈ ಧ್ಯಾನದ ಅಭ್ಯಾಸದಿಂದ ಮನಸ್ಸು ಕ್ಷಣಮಾತ್ರದಲ್ಲಿ ಒತ್ತಡ ಸಂಬಂಧಿತ ಸಮಸ್ಯೆಗಳಿಂದ ಹೊರಬಂದು ಆಳವಾದ ವಿಶ್ರಾಮವನ್ನು ಹೊಂದಿ ಪುನಃಶ್ಚೇತನಗೊಳ್ಳುತ್ತದೆ.

'ಸಹಜ' ಎಂದರೆ ಸಂಸ್ಕೃತದಲ್ಲಿ 'ನಿರಾಯಾಸ' ಎಂದರ್ಥ. 'ಸಮಾಧಿ' ಎಂದರೆ ಆಳವಾದ ಧ್ಯಾನದ ಪರಮಾನಂದದ ಸ್ಥಿತಿ. 'ಸಹಜ ಸಮಾಧಿ ಧ್ಯಾನ'ವು ಒಂದು ಸಹಜ ಮತ್ತು ನಿರಾಯಾಸವಾದ ಧ್ಯಾನದ ಪ್ರಕ್ರಿಯೆ.

ಈ ಧ್ಯಾನದ ನಿಯತವಾದ ಅಭ್ಯಾಸವು ಶಾಂತಿ, ಚೈತನ್ಯ ಹಾಗೂ ವಿಸ್ತೃತ ಅರಿವನ್ನು ದಿನವಿಡೀ ಕಾಪಾಡುವಂತೆ ನಮ್ಮ ದೇಹ ಮತ್ತು ಮನಸ್ಸನ್ನು ಪೋಷಿಸುವ ಮೂಲಕ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸಬಹುದು. ಧ್ಯಾನದ ಈ ಪ್ರಕ್ರಿಯೆಯನ್ನು ಯೋಗಾಭ್ಯಾಸದೊಂದಿಗೆ ಸೇರಿಸಿದಾಗ ಉತ್ತಮವಾದ ಅರೋಗ್ಯ ಮತ್ತು ಪ್ರಶಾಂತವಾದ ಮನಸ್ಸನ್ನು ಹೊಂದಬಹುದು.

  • ಧ್ಯಾನವು ಜಾಗೃತ ಮನಸ್ಸನ್ನು ಅಂತರಾಳದಲ್ಲಿ ಆಳವಾಗಿ ನೆಲೆಸಲು ಅನುವು ಮಾಡಿಕೊಟ್ಟು ವಿಶ್ರಾಂತಿಯನ್ನು ನೀಡುತ್ತದೆ.
  • ಮನಸ್ಸು ಪ್ರಶಾಂತವಾದಾಗ, ಎಲ್ಲ ರೀತಿಯ ಉದ್ವೇಗಗಳು ನಿವಾರಣೆಯಾಗಿ ದೇಹಾರೋಗ್ಯವು ಸುಧಾರಿಸಿ ಬುದ್ಧಿಯು ಕೇಂದ್ರೀಕೃತಗೊಳ್ಳುತ್ತದೆ.

ಸಹಜ ಸಮಾಧಿ ಧ್ಯಾನವು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಶಿಬಿರಾರ್ಥಿಗಳಿಗೆ ಒಂದು ಸರಳವಾದ ಮಂತ್ರವನ್ನು ಮಾನಸಿಕವಾಗಿ ಉಚ್ಚರಿಸಲು ಹೇಳಿಕೊಡುವರು. ಈ ಮಂತ್ರವು ಮನಸ್ಸು ಪ್ರಶಾಂತವಾಗಿ ಅಂತರ್ಮುಖಿಯಾಗಲು ಎಡೆ ಮಾಡಿಕೊಡುವುದು. ಮನಸ್ಸು ಮತ್ತು ನರಮಂಡಲವು ಕೆಲಕ್ಷಣಗಳ ಕಾಲ ಆಳವಾದ ಮೌನದಲ್ಲಿ ವಿಶ್ರಮಿಸಿದಾಗ, ನಮ್ಮ ಸ್ವಾಸ್ಥ್ಯ ಮತ್ತು ಸಮಗ್ರ ಪ್ರಗತಿಯ ಮಾರ್ಗದಲ್ಲಿರುವ ಎಲ್ಲ ಅಡಚಣೆಗಳು ಕ್ರಮೇಣ ವಿಲೀನಗೊಳ್ಳುತ್ತವೆ.

ಅಂತರಾಳದಲ್ಲಿನ ವಿಶ್ರಾಂತಿಯು ದೈನಂದಿನ ಬದುಕಿನಲ್ಲಿ ಹೇಗೆ ಸಹಾಯಕ?

ಒಂದು ನದಿಯು ಪ್ರಶಾಂತವಾಗಿದ್ದಾಗ ಅದರ ಪ್ರತಿಬಿಂಬವು ಸ್ಪಷ್ಟವಾಗಿರುತ್ತದೆ. ಅಂತೆಯೇ ಮನಸ್ಸು ಪ್ರಶಾಂತವಾಗಿದ್ದಾಗ ಅಭಿವ್ಯಕ್ತಿಯಲ್ಲಿ ಹೆಚ್ಚು ಸ್ಪಷ್ಟತೆಯಿರುತ್ತದೆ. ನಮ್ಮ ಗಮನ, ಗ್ರಹಿಕೆ ಮತ್ತು ಅಭಿವ್ಯಕ್ತಿಯ ಸಾಮರ್ಥ್ಯವು ಸುಧಾರಿಸುವುದು. ಇದರ ಪರಿಣಾಮವಾಗಿ ನಾವು ಸಫಲವಾದ ಹಾಗೂ ಸ್ಪಷ್ಟವಾದ ಸಂವಹನ(ಸಂವಾದ)ವನ್ನು ಮಾಡಲು ಸಮರ್ಥರಾಗುತ್ತೇವೆ.

ನಮಗೆ ಮಂತ್ರವು ಏಕೆ ಅಗತ್ಯ?

ಸಂಸ್ಕೃತದಲ್ಲಿ ಮಂತ್ರವನ್ನು "ಮನನಾತ್ ತ್ರಾಯತೇ ಇತಿ ಮಂತ್ರಃ" ಎಂದು ವಿವರಿಸಿದ್ದಾರೆ. ಮಂತ್ರವು ನಿಮ್ಮನ್ನು ಪುನರಾವರ್ತನೆಗಳಿಂದ ರಕ್ಷಿಸುತ್ತದೆ. ಚಿಂತೆಯೆಂದರೆ ಪುನರಾವರ್ತನೆಗೊಳ್ಳುವ ಯೋಚನೆಯಷ್ಟೇ. ಮಂತ್ರವು ನಿಮ್ಮನ್ನು ಚಿಂತೆಗಳಿಂದ ಮುಕ್ತಗೊಳಿಸಲು ಸಹಾಯ ಮಾಡುತ್ತದೆ.

ಸಮೀಪದ ಸಹಜ ಸಮಾಧಿ ಧ್ಯಾನ ಶಿಬಿರವನ್ನು ಸಂಪರ್ಕಿಸಿ. .