ಕೆಲವೇ ನಿಮಿಷಗಳಲ್ಲಿ ಧ್ಯಾನವು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ರೀತಿ

“ನಾನು ಬಹಳ ದಣಿದಿದ್ದೇನೆ; ನನಗೆ ಮತ್ತಷ್ಟು ಶಕ್ತಿಯಿದಿದ್ದರೆ ಎಷ್ಟು ಚೆನ್ನಾಗಿತ್ತು!”

“ಈಗಿನ್ನೂ ಸಂಜೆ ಆರಂಭವಾಗಿದೆ, ಆದರೆ ನನಗೆ ಈಗಲೇ ನಿದ್ದೆ ಆರಂಭವಾಗಿಬಿಟ್ಟಿದೆ”.

ಇಂತಹ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಓಡಾಡುತ್ತಿರುತ್ತವೆಯೆ? ನಿಮ್ಮ ದಿನವನ್ನು ಮತ್ತಷ್ಟು ಚೆನ್ನಾಗಿ ನಿಭಾಯಿಸಲು ಶಕ್ತಿವರ್ಧಕಗಳನ್ನು ಹುಡುಕುತ್ತಿರುವಿರೆ? ನಿಮಗೆ ಅಪಾರವಾಗಿ ಸಹಾಯ ಮಾಡುವ ಒಂದು ಸರಳವಾದ, ಸಹಜವಾದ ಪರಿಹಾರವಿದೆ. ಇದನ್ನು ಓದುತ್ತಿರುವಾಗ ಈ ವಿಷಯದಲ್ಲಿ ಅಷ್ಟೇನೂ ಸಾರವಿಲ್ಲ ಎನಿಸಬಹುದು, ಆದರೆ ಕೆಲವೇ ನಿಮಿಷಗಳಲ್ಲಿ ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಅದೇ ಧ್ಯಾನ.

ಧ್ಯಾನವೆಂದರೆ ಏನನ್ನೂ ಮಾಡದಿರುವ ಕಲೆ. ಧ್ಯಾನವು ಕೆಲವು ಕ್ಷಣಗಳಲ್ಲೇ ಶಕ್ತಿಯನ್ನು ವರ್ಧಿಸುತ್ತದೆ, ಒತ್ತಡವನ್ನು ನಿವಾರಿಸುತ್ತದೆ.

ಧ್ಯಾನದ ರಹಸ್ಯ

ಈ ವಿಶ್ವದಲ್ಲಿರುವ ಪ್ರತಿಯೊಂದು ಜೀವಿಯೊಳಗೂ ಪ್ರಾಣಶಕ್ತಿಯಿದೆ. ಈ ಶಕ್ತಿಯ ನಾಲ್ಕು ಮೂಲಗಳಿವೆ:-

  • ಆಹಾರ
  • ಉಸಿರು
  • ನಿದ್ದೆ
  • ಪ್ರಶಾಂತವಾದ, ಧ್ಯಾನಸ್ಥವಾದ ಮನಸ್ಸಿನ ಸ್ಥಿತಿ ಅಥವಾ ಸರಳವಾಗಿ ಹೇಳಬೇಕೆಂದರೆ ಸಂತೋಷವಾಗಿರುವ ಮನಸ್ಸು.

ಮೊದಲ ಮೂರು ಮೂಲಗಳನ್ನು ಸರಿಯಾಗಿ ನೋಡಿಕೊಂಡರೆ ನಮಗೆ ಬೇಕಾದ ಶಕ್ತಿ ಸಿಗುತ್ತದೆ. ಧ್ಯಾನಸ್ಥವಾದ ಮನಸ್ಸಿಗೆ ಶಕ್ತಿಯ ಮೂಲವಾಗಿರಲು ಹೇಗೆ ಸಾಧ್ಯ?

ನಮ್ಮ ಶಕ್ತಿಯನ್ನು ನಾವು ಕಳೆದುಕೊಳ್ಳುವುದು ಆಲೋಚಿಸುವುದರಿಂದ, ಯೋಜನೆಗಳನ್ನು ಮಾಡುವುದರಿಂದ, ಕೇವಲ ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದಲ್ಲ. ನಿರಂತರವಾಗಿ ನಡೆಯುವ ಆಂತರಿಕ ಸಂಭಾಷಣೆ, ಮನಸ್ಸಿನ ವಟಗುಟ್ಟುವಿಕೆಯಿಂದಲೂ ನಾವು ದಣಿಯುತ್ತೇವೆ. ಧ್ಯಾನವು ನಮ್ಮನ್ನು ತುರಿಯಾವಸ್ಥೆಗೆ, ಪ್ರಶಾಂತವಾದ ಸ್ಥಿತಿಗೆ ಕೊಂಡೊಯ್ಯುತ್ತದೆ. ಇದರಿಂದ ನಮ್ಮ ಶಕ್ತಿಯ ಸಂಚಯವಾಗುತ್ತದೆ.

ಧ್ಯಾನವೇಕೆ ಕೆಲಸ ಮಾಡುತ್ತದೆ

“ಮನಸ್ಸು ಉದ್ರೇಕದಿಂದ ಮುಕ್ತವಾದಾಗ, ಪ್ರಶಾಂತವಾಗಿದ್ದಾಗ, ಶಾಂತಿಯನ್ನು ಹೊಂದಿದ್ದಾಗ ಧ್ಯಾನವಾಗುತ್ತದೆ. ಧ್ಯಾನ ಮಾಡಿದಾಗ ನಿಮ್ಮ ದೇಹವನ್ನು ಶಕ್ತಿಯ ಆಲಯವಾಗಿ ಪರಿವರ್ತಿಸಬಹುದು, ಆಂತರಿಕ ಶಕ್ತಿಯ ಮೂಲವನ್ನು ಉತ್ಪಾದಿಸಿ ಶಕ್ತಿಯ ಆಲಯವಾಗಿ ಪರಿವರ್ತಿಸಬಹುದು”.

- ಗುರುದೇವ್ ಶ್ರೀ ಶ್ರೀ ರವಿಶಂಕರ್

1. ಧ್ಯಾನದ ಸ್ಥಿತಿಯು ಆಳವಾಗಿದ್ದಾಗ ಧ್ಯಾನದ ಪ್ರಭಾವವು, ಧ್ಯಾನವಾದ ನಂತರವೂ ಕೆಲ ನಿಮಿಷಗಳವರೆಗೆ ಮುಂದುವರಿಯುತ್ತದೆ.

2. ದೇಹವು ವಿಶ್ರಮಿಸುತ್ತದೆ, ಆದರೆ ಮನಸ್ಸು ಜಾಗೃತವಾಗಿರುತ್ತದೆ. ಇದರಿಂದ ಪೂರ್ಣ ವಿಶ್ರಾಂತಿ ಸಿಗುತ್ತದೆ.

3. ಧ್ಯಾನದಿಂದ ಒಬ್ಬರ ಅಂತಂಸ್ಫುರಣೆಯ ಸಾಮಥ್ರ್ಯ ಹೆಚ್ಚುತ್ತದೆ.

4. ದೇಹದಲ್ಲಿ ಆಮ್ಲಜನಕದ ಬಳಕೆಯು ಕಡಿಮೆಯಾಗುತ್ತದೆ. ಇದರಿಂದಾಗಿ ಧ್ಯಾನದ ಆ ಕೆಲವು ಕ್ಷಣಗಳಲ್ಲಿ ದೈಹಿಕವಾಗಿ ಆಳವಾದ ವಿಶ್ರಾಂತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಈ ವಿಶ್ರಾಂತಿಯು ಆರು ಅಥವಾ ಎಂಟು  ಗಂಟೆಗಳ ನಿದ್ದೆಗಿಂತಲೂ ಹೆಚ್ಚು ಆಳವಾಗಿರುತ್ತದೆ. ಆದರೆ ಧ್ಯಾನವು ನಿದ್ದೆಗೆ ಪರ್ಯಾಯವಲ್ಲ.

5. ನಿತ್ಯ ಧಾನದಿಂದ ಆರೋಗ್ಯ ಸುಧಾರಿಸುತ್ತದೆ, ಮನಸ್ಸು ಜಾಗೃತವಾಗುತ್ತದೆ, ಬುದ್ಧಿ ತೀಕ್ಷ್ಣವಾಗುತ್ತದೆ. ಒಳ್ಳೆಯ ಆರೋಗ್ಯ ಮತ್ತು ವಿಶ್ರಮಿತವಾದ ಮನಸ್ಸಿನಿಂದ ಸಹಜವಾಗಿಯೇ ಹೆಚ್ಚಿನ ಉತ್ಸಾಹ ಮತ್ತು ಶಕ್ತಿ ಲಭ್ಯವಾಗುತ್ತದೆ.

ಧ್ಯಾನ ಮಾಡಲು ಕಲಿಯಿರಿ

ನಿತ್ಯ ಧ್ಯಾನಿಗಳಿಗೆ ಧ್ಯಾನ ಆಕಾಶದ ಅನುಭವವು ಸುಲಭವಾಗಿ ಆಗುತ್ತದೆ. ಆರಂಭ ಮಾಡುವವರಿಗೂ ಇದು ಸುಲಭ. ನಿರ್ದೇಶಿತ ಧ್ಯಾನಗಳು, ಧ್ಯಾನ ಮಾಡಲು ಆರಂಭಿಸುವ ಅತೀ ಸುಲಭ ದಾರಿಗಳು. ನಿರ್ದೇಶಿತ ಧ್ಯಾನಗಳ ನಿತ್ಯಾಭ್ಯಾಸದ ನಂತರ ಆಳವಾದ ಧ್ಯಾನವಾದ ಅನುಭವವನ್ನು ಪಡೆಯಲು ಮಂತ್ರಧ್ಯಾನ ಅಥವಾ ಸಹಜ ಸಮಾಧಿ ಧ್ಯಾನವನ್ನು ಕಲಿಯಿರಿ. ಅಥವಾ ನೇರವಾಗಿ ಸಹಜ ಸಮಾಧಿ ಧ್ಯಾನವನ್ನು ಕಲಿಯಬಹುದು.

ನಿಮ್ಮ ದಿನನಿತ್ಯದ ಶಕ್ತಿಗಾಗಿ ಕೆಲವು ಸೂಚಿಗಳು:-

  • ನಿಮ್ಮ ಒಳಿತಿಗಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಿ. ಪ್ರತಿದಿನ ಧ್ಯಾನಕ್ಕಾಗಿ 20 ನಿಮಿಷಗಳನ್ನು ಮೀಸಲಿಡಿ.
  • ಧ್ಯಾನ ಮಾಡುವ ಮೊದಲು ವ್ಯಾಯಾಮ ಮಾಡಿ. ಇದರಿಂದ ಪ್ರಯತ್ನರಹಿತವಾಗಿ ಧ್ಯಾನ ಮಾಡಬಹುದು.
  • ನಿಮ್ಮ ಆರೋಗ್ಯದ ಅಭ್ಯಾಸಗಳ ಮೇಲೆ ಗಮನವನ್ನು ಇಡಿ ಮತ್ತು ಆರೋಗ್ಯಕರವಾದ ಆಹಾರವನ್ನು ಅಳವಡಿಸಿಕೊಳ್ಳಿ.
  • ಪ್ರತಿನಿತ್ಯ 6-8 ಗಂಟೆಗಳವರೆಗೆ ನಿದ್ದೆ ಮಾಡಿ. ಧ್ಯಾನವು ಅತ್ಯುತ್ತಮವಾದ ಪುನಶ್ಚೇತಕ, ಆದರೆ ಅದು ನಿದ್ದೆಗೆ ಪರ್ಯಾಯವಲ್ಲ.

ಧ್ಯಾನವನ್ನು ತುರಿಯಾವಸ್ಥೆ ಎಂದೂ ಕರೆಯುತ್ತಾರೆ. ಈ ಸ್ಥಿತಿಯಲ್ಲಿ ಜಾಗೃತಿ ಮತ್ತು ವಿಶ್ರಾಂತಿ ಒಮ್ಮೆಲೇ ಇರುತ್ತದೆ. ಹಿಂದು ಧರ್ಮದಲ್ಲಿ “ತುರಿಯ” (ಸಂಸ್ಕೃತದಲ್ಲಿ ನಾಲ್ಕನೆಯ ಎಂದರ್ಥ) ಎಂದರೆ “ಶುದ್ಧ ಚೈತನ್ಯ”, “ಅವಸ್ಥೆ” ಎಂದರೆ “ಸ್ಥಿತಿ”. ತುರಿಯ ಚೈತನ್ಯದ ಮೂರು ಸಾಮಾನ್ಯ ಸ್ಥಿತಿಗಳಾದ ಜಾಗೃತಿ, ಸ್ವಪ್ನ ಮತ್ತು ಸುಷುಪ್ತಿ, ಎಂದರೆ ಆಳವಾದ ನಿದ್ದೆಯನ್ನು ಮೀರಿರುವ ಸ್ಥಿತಿ. ತುರಿಯ ಮೋಕ್ಷದ ಸ್ಥಿತಿ, ಎಲ್ಲಾ ದ್ವೈತಗಳಿಂದ, ಘರ್ಷಣೆಗಳಿಂದ, ಎಲ್ಲಾ ರಾಗ-ದ್ವೇಷಗಳಿಂದ ಮೇಲಿರುವ, ಇವುಗಳಿಗೆ ಅತೀತವಾದ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಒಬ್ಬರು ಅನಂತ ಆನಂದವನ್ನು ಮತ್ತು ಆತ್ಮದ ನಿಯಮರಹಿತವಾದ ಸಂತೋಷವನ್ನು ಅನುಭವಿಸಬಹುದು.

ಗುರುದೇವ್ ಶ್ರೀ ಶ್ರೀ ರವಿಶಂಕರರ ಪ್ರವಚನಗಳಿಂದ ಸ್ಫೂರ್ತಿ ಪಡೆದ ಲೇಖನ. ಆರ್ಟ್ ಆಫ್ ಲಿವಿಂಗ್‍ನ ಶಿಕ್ಷಕಿಯಾದ ಡಾ|| ಪ್ರೇಮ ಶೇಷಾದ್ರಿಯವರ ಮಾರ್ಗದರ್ಶನದಲ್ಲಿ ಬರೆದ ಲೇಖನ.