ನಾವೆಲ್ಲರೂ ಕೋಪಗೊಳ್ಳುತ್ತೇವೆ-ಕೆಲವೊಮ್ಮೆ, ಪ್ರತಿದಿನ! ಇದೇನೂ ಅಸಹಜವಾದುದಲ್ಲ. ಆದರೆ ನೀವು ಕೋಪಗೊಳ್ಳುತ್ತಿರುವಿರಿ ಎನ್ನುವುದರ ಬಗ್ಗೆ ನಿಮಗೆ ಅರಿವು ಇದ್ದರೆ ಒಳ್ಳೆಯದು.
ನಮ್ಮಲ್ಲಿ ಕೆಲವರು ಕೋಪವನ್ನು ನುಂಗಿಕೊಳ್ಳುತ್ತಾರೆ ಹಾಗೂ ಇದರಿಂದಾಗಿ, ನಿಧಾನವಾಗಿ ಕುದಿಯುವ ಹಂತಕ್ಕೆ ತಲುಪುತ್ತಾರೆ. ನಿಧಾನಿಸಿದರೂ, ಕೋಪವು ತುತ್ತ ತುದಿಯನ್ನು ಮುಟ್ಟಿದಾಗ ,ಅದು ನಮ್ಮನ್ನು ಮಾತ್ರವಲ್ಲದೆ ನಮ್ಮ ಸುತ್ತುಮುತ್ತಲೂ ಇರುವವರನ್ನು ಕೂಡ ದಹಿಸಿ, ಕೆರಳಿಸುತ್ತದೆ.
ಇನ್ನು ಕೆಲವರು ಶೀಘ್ರವಾಗಿ ಕೋಪಗೊಳ್ಳುತ್ತಾರೆ ಮತ್ತು ಕೂಡಲೇ ಅದರಿಂದ ಹೊರಗೆ ಬರುತ್ತಾರೆ. ಹೇಗೆಯೇ ಇದ್ದರೂ ಆಗಾಗ ಕೋಪದ ಹಿಡಿತದಿಂದ ತಪ್ಪಿಸಿಕೊಳ್ಳಲು ಮಾತ್ರ ನಮಗೆ ಸಾಧ್ಯವಾಗುವುದಿಲ್ಲ.
ಪುನರಾವರ್ತಿಸುತ್ತಿರುವ ಈ ವರ್ತುಲದಿಂದ ಹೊರಬರಲು ಏನಾದರೂ ಮಾರ್ಗವಿದೆಯೇ?
ಪೂಜ್ಯ ಗುರುದೇವರಾದ ಶ್ರೀ ಶ್ರೀ ರವಿಶಂಕರ್ ರವರು ಕೋಪಕ್ಕೆ ಸಂಬಂಧಿಸಿದ ಕೆಲವು ಚಿಕ್ಕಪುಟ್ಟ ಪ್ರಶ್ನೆಗಳಿಗೆ ಕೊಡುವ ಉತ್ತರಗಳು ಈ ಕೆಳಗಿನಂತಿವೆ. ಪ್ರಕ್ಷುಬ್ಧತೆಯಿಂದ ನಮ್ಮ ಭಾವನೆಗಳು ಕುದಿಯುತ್ತಿರುವಾಗ ಅವುಗಳನ್ನು ಜಯಿಸುವ ಮಾರ್ಗಗಳನ್ನು ಕೂಡ ಗುರುದೇವರು ಸೂಚಿಸುತ್ತಾರೆ.
ಕೋಪವು ನಿಮ್ಮ ಶಕ್ತಿಯನ್ನು, ಇತರರೊಂದಿಗೆ ನಿಮಗಿರುವ ಬಾಂಧವ್ಯದ ಮಟ್ಟವನ್ನು ಹಾಗೂ ಜೀವನದ ಬಗೆಗಿನ ನಿಮ್ಮ ತಿಳುವಳಿಕೆಯನ್ನು ಅವಲಂಬಿಸಿರುತ್ತದೆ.
– ಗುರುದೇವ್ ಶ್ರೀ ಶ್ರೀ ರವಿಶಂಕರ್
ನಿಮ್ಮ ಕೋಪವು ಯಾವುದರ ಕಡೆಗೆ ನಿರ್ದೇಶಿಸಲ್ಪಟ್ಟಿದೆ…
ನಿಮಗೆ ಯಾವುದರ ಬಗ್ಗೆ ಕೋಪ ಬರುತ್ತದೆ? ಜನರು? ಘಟನೆಗಳು? ಸನ್ನಿವೇಶಗಳು?ನೀವು ವಸ್ತುಗಳ ಮೇಲೆ ಖಂಡಿತವಾಗಿಯೂ ಕೋಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ನಿಮ್ಮ ಕೋಪವು ಜನರು ಅಥವಾ ಸನ್ನಿವೇಶಗಳ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಜನರ ಗುಂಪಿನಲ್ಲಿ ನೀವು ಕೂಡ ಸೇರಿದ್ದೀರಿ-ಅಲ್ಲವೇ? ಒಂದೋ ನೀವು ನಿಮ್ಮ ಮೇಲೆ ಅಥವಾ ಬೇರೆಯವರ ಮೇಲೆ ಕೋಪಗೊಳ್ಳುತ್ತೀರಿ. ಈ ಕ್ಷಣವೇ ನೀವು ಎಚ್ಚೆತ್ತುಕೊಂಡು ನೋಡಿದರೆ ಇವೆರಡೂ ಕೂಡ ಅರ್ಥಹೀನ ಮತ್ತು ನಿಷ್ಪ್ರಯೋಜಕವೆಂಬ ಅರಿವು ನಿಮಗೆ ಉಂಟಾಗುತ್ತದೆ.
ಕೋಪಕ್ಕೆ ತುತ್ತಾದಾಗ: ನೀವು ಹೋಗುವ ಮತ್ತು ಬರುವ ರಸ್ತೆ
ಎಂದೂ ಕೋಪಕ್ಕೆ ಬಲಿಯಾಗದೆ ಇರಲು ಸಾಧ್ಯವಿಲ್ಲವೇ? ಇಲ್ಲಿಯವರೆಗೆ ನಿಮಗೆ ದೊರೆತ ಅನುಭವವೇನು? ಬಾಲ್ಯದಲ್ಲಿ, ನಿಮ್ಮ ಆಟಿಕೆಯನ್ನು ನಿಮ್ಮಿಂದ ಕಸಿದುಕೊಂಡಾಗ, ನಿಮಗೆ ಕೋಪ ಬರುತ್ತಿತ್ತು. ಹಾಲು, ಆಹಾರ, ಟೋಫಿಗಳು ಅಥವಾ ಆಟಿಕೆಗಳು ನಿಮಗೆ ಬೇಕಾದಾಗ ಸಿಕ್ಕದಿದ್ದರೆ ನೀವು ಗಟ್ಟಿಯಾಗಿ ಕಿರುಚುತ್ತಿದ್ದಿರಿ. ಹೌದಲ್ಲವೇ? ಹೌದು! ನೀವು ಅದನ್ನು ಮಾಡಿದ್ದೀರಿ. ಅನಂತರ ನಿಮ್ಮ ಶಾಲೆ, ಕಾಲೇಜು ಮತ್ತು ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ , ಸಾಕಷ್ಟು ಸಲ ನಿಮ್ಮ ಸ್ನೇಹಿತರೊಂದಿಗೆ, ಕೋಪಗೊಂಡಿದ್ದೀರಿ. ಹಾಗಾಗಿ ಕೋಪವೆನ್ನುವುದು ಪ್ರತಿಯೊಬ್ಬರೂ ಕೂಡ ಸಾಮಾನ್ಯವಾಗಿ ಅನುಭವಿಸುವ ಭಾವನೆಯಾಗಿದೆ.
ಆದುದರಿಂದ ಕೋಪವು ಸಹಜವಾಗಿದ್ದರೂ,ಕೋಪದಿಂದ ಬೇಗನೆ ಹೊರಬರುವುದು ಹೇಗೆ ಎನ್ನುವುದೇ ಅತೀ ಮುಖ್ಯವಾದ ವಿಷಯವಾಗಿದೆ.
ನೀವು ಎಷ್ಟು ಕಾಲಾವಧಿಗೆ ಒಂದು ಸಲ ಕೋಪಗೊಳ್ಳುತ್ತೀರಿ? ನಿಮ್ಮ ಕೋಪದ ಆವರ್ತನವು, ನಿಮ್ಮಲ್ಲಿರುವ ಶಕ್ತಿಯೊಂದಿಗೆ ವಿಲೋಮವಾದ ಅನುಪಾತದಲ್ಲಿರುತ್ತದೆ. ನೀವು ಎಷ್ಟು ಬಲಶಾಲಿಯಾಗಿರುತ್ತೀರೋ, ಅಷ್ಟು ಕಡಿಮೆ ಕೋಪಕ್ಕೆ ಒಳಗಾಗುತ್ತೀರಿ; ನೀವು ಎಷ್ಟು ದುರ್ಬಲರಾಗಿರುತ್ತೀರೋ, ಅಷ್ಟು ಹೆಚ್ಚು ಕೋಪಕ್ಕೆ ಒಳಗಾಗುತ್ತೀರಿ: ನೀವೇ ನಿಮ್ಮೊಳಗೆ ಇದನ್ನು ನೋಡಿಕೊಳ್ಳಬೇಕು. ನಿಮ್ಮ ಶಕ್ತಿಯು ಎಲ್ಲಿ ಅಡಗಿದೆ? ನೀವು ಯಾಕೆ ಅದನ್ನು ಕಳೆದುಕೊಳ್ಳುತ್ತೀರಿ?
ಜೀವನದ ಬಗ್ಗೆ ಇರುವ ನಿಮ್ಮ ದೃಷ್ಟಿಕೋನ , ನಿಮ್ಮ ಜೀವನದ ರೀತಿ ನೀತಿಗಳು ಮತ್ತು ನಿಮ್ಮ ಸುತ್ತಲೂ ಇರುವ ಜನರ ಬಗ್ಗೆ ನಿಮ್ಮಲ್ಲಿರುವ ತಿಳುವಳಿಕೆ, ಇವುಗಳೆಲ್ಲವೂ ನಿಮ್ಮೊಳಗೆ ಕೋಪವನ್ನು ಹುಟ್ಟು ಹಾಕುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.
ಕೋಪದ ಮೂರನೆಯ ಕಾರಣವು ಮೋಹ- ನಿಮ್ಮಲ್ಲಿರುವ ಮೋಹವು ಕೋಪವನ್ನು ಹುಟ್ಟಿಸುತ್ತದೆ. ಯಾವುದಾದರೂ ವಿಷಯದ ಬಗ್ಗೆ ನಿಮಗಿರುವ ಇಚ್ಛೆಯ ತೀವ್ರತೆಗೆ ಅನುಗುಣವಾಗಿ ನಿಮ್ಮಲ್ಲಿ ಕೋಪವು ಆವಿರ್ಭವಿಸುತ್ತದೆ. ಆದುದರಿಂದ ನಿಮ್ಮ ಕೋಪದ ಹಿಂದೆ ನಿಮ್ಮ ಬಯಕೆಯು ಆಳವಾಗಿ ಹುದುಗಿದೆ. ಅದನ್ನು ನೀವು ಗುರುತಿಸಿಕೊಳ್ಳಬೇಕಾಗಿದೆ. ಅದು ನಿಮ್ಮ ಆರಾಮಕ್ಕಾಗಿ, ಇಚ್ಛೆಗಾಗಿ ಅಥವಾ ಅಹಂಕಾರಕ್ಕಾಗಿ ಆಗಿದ್ದರೆ, ನೀವು ವಿಭಿನ್ನವಾದ ಪ್ರತಿಕ್ರಿಯೆಯನ್ನು ಹೊಂದಿರುತ್ತೀರಿ. ಆದರೆ, ನಿಮ್ಮ ಕೋಪವು ಮತ್ತೊಬ್ಬರ ಬಗ್ಗೆ ಇರುವ ಸಹಾನುಭೂತಿಯಿಂದಾಗಿದ್ದರೆ ಅಥವಾ, ನಿಮ್ಮ ಕೋಪವು ವಿಷಯಗಳನ್ನು ಸರಿಪಡಿಸುವ ಉದ್ದೇಶವನ್ನು ಹೊಂದಿದ್ದರೆ, ಆಗ ಅದರ ಪ್ರತಿಕ್ರಿಯೆಯು ವಿಭಿನ್ನವಾಗಿರುತ್ತದೆ. ಈ ರೀತಿಯ ಕೋಪವು ಕೆಟ್ಟದಲ್ಲ.
ಸಕಾರಾತ್ಮಕ ಬದಲಾವಣೆಗಾಗಿ ಕೋಪವನ್ನು ಸಾಧನವನ್ನಾಗಿ ಬಳಸುವುದು
ನೀವು ನಿಮ್ಮಕೋಪವನ್ನು ಹತೋಟಿಗೆ ತರಬೇಕಾಗಿದೆ. ಕೋಪವು ನಿಮ್ಮನ್ನು ಬಳಸಿಕೊಳ್ಳಲು ಬಿಡಬೇಡಿ. ಬದಲಿಗೆ, ಅಗತ್ಯವಿದ್ದಾಗ ನೀವು ಕೋಪವನ್ನು ಸಾಧನವಾಗಿ ಬಳಸಿಕೊಳ್ಳಿ.
ಕೋಪವು ಎಲ್ಲಾ ಸಮಯದಲ್ಲೂ ಕೆಟ್ಟದು ಎಂದು ಭಾವಿಸಬೇಡಿ. ಇದನ್ನು ಮಿತವಾಗಿ ಬಳಸಿದರೆ, ಅದು ಅಮೂಲ್ಯವಾದ ಮತ್ತು ಮೌಲ್ಯಯುತವಾದ ಗುಣವನ್ನು ಹೊಂದಿರುತ್ತದೆ. ಮತ್ತೊಂದೆಡೆ ಹೇಳುವುದಾದರೆ, ಇದನ್ನು ಪ್ರತಿದಿನ ಬಳಸಿದರೆ, ಅದಕ್ಕೆ ಯಾವುದೇ ಮೌಲ್ಯವಿರುವುದಿಲ್ಲ. ಬದಲಿಗೆ, ಅದು ನಿಮ್ಮ ಮೌಲ್ಯವನ್ನು ಕುಗ್ಗಿಸುತ್ತದೆ.
ಗತಕಾಲದ ಬಗ್ಗೆ ನಿಮಗಿರುವ ಕೋಪದ ನಿಗ್ರಹ
ಹಿಂದೆ ನಡೆದು ಹೋದ ಘಟನೆಗಳ ಬಗ್ಗೆ ಇರುವ ಕೋಪವನ್ನು ನೀವು ಹೇಗೆ ತೊಡೆದುಹಾಕಬಹುದು? ನೀವು ಬಲವಂತವಾಗಿ ಹಿಂದೆ ನಿಮಗೆ ಬಂದ ಕೋಪವನ್ನು ನಿಗ್ರಹಿಸಿದ್ದೀರಿ ಮತ್ತು ಅದು ವಿರೇಚನದಂತೆ ಹೊರಬರಬೇಕು ಎಂದು ನೀವು ಭಾವಿಸಿದರೆ… ಇದಕ್ಕೆ ಅಂತ್ಯವೆಂಬುದೇ ಇಲ್ಲ . ಇದು ಸಮುದ್ರದ ಅಲೆಗಳನ್ನು ತಡೆಯಲು ಮಾಡುವ ಪ್ರಯತ್ನದಂತೆ ನಿಷ್ಪ್ರಯೋಜಕ!
ಯಾಕೆಂದರೆ ಕೋಪವು ಒಂದು ಪ್ರತ್ಯೇಕವಾದ ಶಕ್ತಿಯಲ್ಲ. ಇದು ಒಂದೇ ಶಕ್ತಿಯಾಗಿದ್ದು, ಕೋಪವಾಗಿ, ಸಹಾನುಭೂತಿಯಾಗಿ; ಪ್ರೀತಿಯಾಗಿ ಮತ್ತು ಉದಾರತೆಯ ರೂಪದಲ್ಲಿ ಪ್ರಕಟವಾಗುತ್ತದೆ. ಇವೆಲ್ಲವೂ ವಿಭಿನ್ನ ಶಕ್ತಿಗಳಲ್ಲ. ಬದಲಿಗೆ, ವಿಭಿನ್ನ ಬಣ್ಣಗಳ ಮೂಲಕ ಹೊರಗೆ ಪ್ರಕಟವಾಗುವ ಒಂದೇ ಒಂದು ಶಕ್ತಿಯಾಗಿದೆ. ಇದೇ ರೀತಿಯಲ್ಲಿ ನಾವು ನಮ್ಮ ಮನೆಗಳಲ್ಲಿ ,ರೆಫ್ರಿಜರೇಟರ್, ದೀಪಗಳು ಮತ್ತು ಫ್ಯಾನ್ಗಳಿಗೆ ಒಂದೇ ಒಂದು ವಿದ್ಯುತ್ ಶಕ್ತಿಯನ್ನು ಬಳಸುತ್ತೇವೆ.
ನೀವು ನಿಮ್ಮ ಕೋಪವನ್ನು ನಿಗ್ರಹಿಸಿದ್ದೀರಿ ಎಂದು ಯಾವತ್ತೂ ಭಾವಿಸದಿರಿ. ವಿವೇಕ ದೃಷ್ಟಿಯೊಂದಿಗೆ ನಿಮ್ಮ ಬುದ್ಧಿ ಮತ್ತು ಕಣ್ಣುಗಳು ಸತ್ಯದ ವಾಸ್ತವಿಕತೆಯನ್ನು ಕಂಡುಕೊಂಡರೆ, ಗತಕಾಲದ ಬಗ್ಗೆ ನಿಮಗಿರುವ ಕೋಪವು ನಿಮ್ಮ ಮೂರ್ಖತನ ಮತ್ತು ಬುದ್ಧಿವಂತಿಕೆಯ ಕೊರತೆ, ಎನ್ನುವುದು ನಿಮಗೆ ಗೋಚರವಾಗುತ್ತದೆ.
ಕೋಪಗೊಂಡ ಜನರೊಂದಿಗೆ ವ್ಯವಹರಿಸುವುದು
ಕೋಪಗೊಂಡ ಜನರೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ?ನೀವು ದೀಪಾವಳಿಯಲ್ಲಿ ಪಟಾಕಿಗಳೊಂದಿಗೆ ಆಟವಾಡುವಂತೆ, ಅದನ್ನೆಲ್ಲ ನೋಡಿ ಆನಂದಿಸಲು ಕಲಿಯಿರಿ!ನೀವು ಪಟಾಕಿಗಳ ಹತ್ತಿರಕ್ಕೆ ಹೋಗಿ, ಅವುಗಳನ್ನು ಬೆಳಗಿಸಿದ ಕೂಡಲೇ ಹಿಂದಕ್ಕೆ ಓಡಿಬರುತ್ತೀರಿ! ಅನಂತರ, ದೂರದಿಂದ ಅದನ್ನು ನೋಡಿ ಆನಂದಿಸುತ್ತೀರಿ. ಅಲ್ಲವೇ?ಕೋಪಗೊಂಡ ಜನರೊಂದಿಗೆ ವ್ಯವಹರಿಸುವಾಗಲೂ ನೀವು ಇದೇ ರೀತಿ ಮಾಡಬೇಕು. ನೀವು ದುಬಾರಿ ಕಾರ್ಪೆಟ್ನಲ್ಲಿ ಅಥವಾ ಮನೆಯೊಳಗೆ ಪಟಾಕಿಗಳನ್ನು ಸಿಡಿಸುವುದಿಲ್ಲ, ಅವುಗಳ ಸುತ್ತಲೂ ಯಾವುದೇ ಅಮೂಲ್ಯ ವಸ್ತುಗಳು ಇಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತೀರಿ ಅಥವಾ ಪಟಾಕಿಗಳನ್ನು ಹೊರಗೆ ಉದ್ಯಾನಕ್ಕೆ ಕೊಂಡೊಯ್ಯುತ್ತೀರಿ ,ಇಲ್ಲವೇ ಬೀದಿಗಳಲ್ಲಿಟ್ಟು ಉರಿಸುತ್ತೀರಿ. ಅಲ್ಲವೇ?ಹಾಗೆಯೇ, ಕೋಪಗೊಂಡ ಜನರೊಂದಿಗೆ ಮೋಜು ಮಾಡಲು ನೀವು ಕಲಿತುಕೊಳ್ಳಬೇಕು; ಅವರಿಲ್ಲದಿದ್ದರೆ, ಈ ಜಗತ್ತಿನಲ್ಲಿ ಯಾವುದೇ ಮೋಜು ಇರುವುದಿಲ್ಲ!
ಕೋಪಿಸಿಕೊಂಡವರೊಂದಿಗೆ ನೀವು ಮರಳಿ ಪ್ರತಿಕ್ರಿಯೆಯನ್ನು ತೋರಿಸದಿರುವುದು ಒಳಿತು. ಯಾಕೆಂದರೆ ನೀವು ನಿಮ್ಮ ಕೋಪವನ್ನು ವ್ಯಕ್ತಪಡಿಸಿದರೆ, ಮತ್ತೆ ಅದಕ್ಕಾಗಿ ಪಶ್ಚಾತ್ತಾಪ ಪಡುವಂತಾಗುತ್ತದೆ. ಅದನ್ನು ನೀವು ನಿಗ್ರಹಿಸಿದ್ದೀರಿ ಎಂದು ಕೂಡ ಪರಿಗಣಿಸಬೇಡಿ. ಎಲ್ಲೋ ಆ ಕ್ಷಣಗಳಲ್ಲಿ ಪ್ರತಿಕ್ರಿಯಿಸದೆ ಇರುವಷ್ಟು ನಿಮ್ಮ ಪ್ರಜ್ಞೆಯು ಜಾಗೃತವಾದ ಸ್ಥಿತಿಯಲ್ಲಿತ್ತು. ಅಷ್ಟೇ! ಹಾಗಾಗಿ ಇದನ್ನು ನಿಮ್ಮ ಅನುಕೂಲಕ್ಕಾಗಿಯೇ ಆಯಿತು ಎಂಬ ದೃಷ್ಟಿಯಿಂದ ನೋಡಿ. ಇದನ್ನು ನಿಮ್ಮ ದುರ್ಬಲತೆಯೆಂದು ಭಾವಿಸಬೇಡಿ. ನೀವು ಕೋಪದಿಂದ ಪ್ರತಿಕ್ರಿಯಿಸಿಲ್ಲವೆಂದಾದರೆ, ಆ ಕ್ಷಣದಲ್ಲಿ ನೀವು ಬುದ್ಧಿವಂತರಾಗಿ ವರ್ತಿಸಿದ್ದೀರಿ.
ನಿಮ್ಮ ಕೋಪದ ಸಮರ್ಥನೆ… ಇದು ಒಂದು ಕಟ್ಟುಕಥೆ…
ನೀವು ಕೋಪವನ್ನು ವ್ಯಕ್ತಪಡಿಸುವುದರಿಂದ ಇನ್ನೊಬ್ಬ ವ್ಯಕ್ತಿಯು ಸರಿಯಾಗುವುದಿಲ್ಲ, ಅಥವಾ ಅದು ನಿಮ್ಮ ಜೀವನವನ್ನು ಉತ್ತಮಗೊಳಿಸುವುದಿಲ್ಲ. ಈ ರೀತಿಯ ಪದಗಳನ್ನು ಬಳಸಿಕೊಂಡು ನೀವು ನಿಮ್ಮ ಕೋಪದ ಸಮರ್ಥನೆಯನ್ನು ಮಾಡಿಕೊಳ್ಳುವುದು ಅಥವಾ-ಕೋಪವನ್ನು ನಿಗ್ರಹಿಸುವುದು-ಮುಂತಾದುವುಗಳೆಲ್ಲಾ ಅರ್ಧ ಬೇಯಿಸಿದ ಮನೋವಿಜ್ಞಾನವಾಗಿದೆ.
ವಿವೇಕವಿದ್ದಾಗ ಮಾತ್ರ, ನೀವು ವಿಷಯಗಳನ್ನು ಯತಾರ್ಥವಾಗಿ ಅರ್ಥ ಮಾಡಿಕೊಂಡು, ಇದ್ದದ್ದನ್ನು ಇದ್ದ ಹಾಗೆಯೇ ತಿಳಿದುಕೊಳ್ಳಬಹುದು. ಒಂದು ವೇಳೆ ನೀವು ಪ್ರತಿಕ್ರಿಯೆಯನ್ನು ತೋರಿಸಿದಿರೆಂದಾದರೆ, ಅದು ಯಾವಾಗಲೂ ನಿಮ್ಮ ಬೆಳವಣಿಗೆಗೆ ಹಾನಿಕರವಾಗಿರುತ್ತದೆ. ನೀವು ಸನ್ನಿವೇಶಕ್ಕೆ ಅನುಗುಣವಾಗಿ ವ್ಯವಹರಿಸಬೇಕೇ ಹೊರತು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆಯನ್ನು ತೋರಿಸಬಾರದು. ನಿಗ್ರಹಿಸಿದ ಕೋಪವೆಂದರೆ ಪ್ರತಿಕ್ರಿಯೆಯನ್ನು ತೋರಿಸದೆ ಅದುಮಿಟ್ಟ ಕೋಪ. ನೀವು ಪ್ರತಿಕ್ರಿಯಿಸದಿದ್ದರೆ, ಅದು ಒಳ್ಳೆಯದು!
ಪ್ರ. ಹಿಂದಿನದರ ಬಗ್ಗೆ ಕೋಪಗೊಳ್ಳುವುದು ಎಷ್ಟು ಬುದ್ಧಿವಂತಿಕೆಯಾಗಿದೆ?
ಗುರುದೇವ್ : ಹಿಂದಿನದರ ಬಗ್ಗೆ ಕೋಪಗೊಳ್ಳುವುದರಿಂದ ಏನಾದರೂ ಪ್ರಯೋಜನವಿದೆಯೇ?
ಮುಲ್ಲಾ ನಸುರುದ್ದೀನ್ ಬಗ್ಗೆ ಒಂದು ಕಥೆ ಇದೆ. ಅವನ ಮಗ ದುಬಾರಿ ಎಲೆಕ್ಟ್ರಾನಿಕ್ ಉಪಕರಣವನ್ನು ಉಪಯೋಗಿಸಲು ಹೊರಟಿದ್ದನು, ಮತ್ತು ಅವನು ತನ್ನ ಮಗನಿಗೆ ಕಪಾಳಮೋಕ್ಷ ಮಾಡಿದನು! ಏಕೆ ಹಾಗೆ ಮಾಡಿದನೆಂದು ಮುಲ್ಲಾನನ್ನು ಕೇಳಿದಾಗ, “ಅದು ಮುರಿದುಹೋದ ನಂತರ ಅವನಿಗೆ ಕಪಾಳಮೋಕ್ಷ ಮಾಡುವುದರಲ್ಲಿ ಏನು ಖುಷಿಯಿದೆ”? ಎಂದು ಹೇಳಿದನು!
ಹಿಂದೆ ಸಂಭವಿಸಿದ ಯಾವುದೋ ವಿಷಯದ ಬಗ್ಗೆ ಕೋಪಗೊಳ್ಳುವುದು ಮೂರ್ಖತನದ ಸಂಕೇತವಾಗಿದೆ. ನಾನು ಕೋಪಗೊಳ್ಳುವುದಿಲ್ಲವೇ ಎಂದು ಜನರು ನನ್ನನ್ನು ಕೇಳುತ್ತಾರೆ. ಆದರೆ, ನಾನು ಯಾವುದರ ಬಗ್ಗೆ ಕೋಪಗೊಳ್ಳಬೇಕು? ಈಗಾಗಲೇ ಕಳೆದುಹೋದ ಭೂತಕಾಲದ ಬಗ್ಗೆ? ಅಥವಾ ಪ್ರಸ್ತುತ ಏನಾಗುತ್ತಿದೆ ಎಂಬುದರ ಬಗ್ಗೆ?
ನಿಮಗೆ ಕೋಪವು ಬರುತ್ತದೆ. ಆದರೆ ಕೋಪಕ್ಕೆ ಕೋಪದಿಂದ ಪ್ರತಿಕ್ರಿಯಿಸುವುದು… ಎಂಥಹ ಮೂರ್ಖತನ! ಯಾರಾದರೂ ಪದೇ ಪದೇ ತಪ್ಪು ಮಾಡಿದರೆ, ನೀವು ಕೋಪವನ್ನು ತೋರಿಸಬಹುದು, ಆದರೆ ಅದರಲ್ಲಿ ಮುಳುಗಬೇಡಿ.
ಆರೋಗ್ಯ ವರ್ಧಕ ಗುಸ್ಸಾ – ಆರೋಗ್ಯಕರ ಕೋಪ ಎಂದರೆ ನೀರಿನ ಮೇಲೆ ಎಳೆಯಲಾದ ರೇಖೆ ಇರುವವರೆಗೆ ಮಾತ್ರ ಉಳಿಯುವಂತಹ ಕೋಪ.
ಯಾರಾದರೂ ತಪ್ಪು ಮಾಡಿದಾಗ, ನೀವು ಕೋಪವನ್ನು ತೋರಿಸಲೇಬಾರದು ಎಂದು ಇದರ ಅರ್ಥವಲ್ಲ, ಆದರೆ ಅದರೊಂದಿಗೆ ಬೆರೆತು ಒಂದಾಗಿ ಬಿಡುವುದು ಬುದ್ಧಿಹೀನವಾಗಿದೆ. ವಿಕಾರಗಳಿಂದಾಗಿ ನಿಮ್ಮ ಮನಸ್ಸು ಆತ್ಮನಿಂದ ದೂರಕ್ಕೆ ಹೋಗದ ಹಾಗೆ ನೀವು ಮಾಡುವ ಸಾಧನೆಯು ನಿಮ್ಮನ್ನು ರಕ್ಷಿಸುತ್ತದೆ.
ನಿಮ್ಮ ಕೋಪಕ್ಕೆ ಎಟುಕದೆ, ಅದರಿಂದ ಬಹಳಷ್ಟು ದೂರಕ್ಕೆ ಹೋಗುವ ಎತ್ತರದ ಹಾದಿ
ಕೋಪವು ಬಂದಾಗ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಅದು ಬಂದು ಹೋದನಂತರ ನಿಮಗೆ ಅಪರಾಧೀ ಭಾವನೆಯು ಉಂಟಾಗುತ್ತದೆ. ಕೋಪದಿಂದ ಮತ್ತು ತಾನು ತಪ್ಪಿತಸ್ಥತನೆನ್ನುವ ಈ ಚಕ್ರದಿಂದ ನೀವು ಹೇಗೆ ಹೊರಬರುವುದು? ನಿಮ್ಮ ಕೋಪವನ್ನು ವ್ಯಕ್ತಪಡಿಸಿದರೆ, ಆಗ ನಿಮ್ಮನ್ನು ನೀವು ತಪ್ಪಿತಸ್ಥರೆಂದು ಭಾವಿಸುತ್ತೀರಿ. ಒಂದು ವೇಳೆ ಅದನ್ನು ವ್ಯಕ್ತಪಡಿಸದಿದ್ದರೆ, ನೀವು ಅದನ್ನು ನಿಗ್ರಹಿಸಿದ್ದೀರಿ ಎಂದು ನಿಮಗೆ ಅನಿಸುತ್ತದೆ.
ಇವೆರಡನ್ನೂ ಮೀರಿ ಮೇಲೇರಲು, ಜೀವನವನ್ನು ವಿಭಿನ್ನವಾದ ದೃಷ್ಟಿಕೋನದಿಂದ ನೋಡಿ ಹಾಗೂ ನಿಮ್ಮೊಳಗೆ ವಿಶಾಲವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ.
ನೀವು ನಿಮ್ಮ ಜೀವನದ ಸನ್ನಿವೇಶಗಳನ್ನು ಬದಲಾಯಿಸಿಕೊಂಡರೆ, ಜೀವನವು ಒಂದು ಹೋರಾಟವಾಗಿ ಕಾಣುವುದಿಲ್ಲ. ಈ ಭಾವನೆಗಳು ನಿಮ್ಮನ್ನು ನಿಜವಾಗಿಯೂ ಬಂಧಿಸುವುದಿಲ್ಲ ಅಥವಾ ನಿಮ್ಮನ್ನು ತಪ್ಪಿತಸ್ಥರಂತೆ ಅಥವಾ ಉಸಿರುಗಟ್ಟಿಸುವಂತೆ ಮಾಡುವುದಿಲ್ಲ ಎಂಬುದನ್ನು ನೀವು ನೋಡುತ್ತೀರಿ. ಆಗ ಅವುಗಳು ಕೇವಲ ಅಲಂಕಾರದ ವಸ್ತುಗಳಾಗಿ ಗೋಚರಿಸುತ್ತವೆ. ಅಲಂಕರಣಗಳು, ನಿಜವಾಗಿಯೂ, ಅಲ್ಲಿ ಇರುವ ವಸ್ತುವಿಗೆ ಮುಖ್ಯವಲ್ಲ. ಇದು ಕೇಕ್ನ ಐಸಿಂಗ್ನಲ್ಲಿ ವಿವಿಧ ಬಣ್ಣಗಳನ್ನು ತಯಾರಿಸಿದಂತೆ.
ಆರೋಗ್ಯಕರ ಕೋಪದ ಬಗ್ಗೆ ಇನ್ನಷ್ಟು ಓದಿ.
(ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರುದೇವರು ನೀಡಿದ ಭಾಷಣಗಳಿಂದ ಸಂಗ್ರಹಿಸಲಾಗಿದೆ)