ಓಣಂ ಎಂದರೆ ಪುರಾಣಕಾಲದ ರಾಜ ಮಹಾ ಬಲಿಯು ತನ್ನ ಜನರನ್ನು ಭೇಟಿ ಮಾಡಲು ಆಗಮಿಸುವ ಕಾಲ. ಈ 10 ದಿನಗಳ ಪರ್ವಕಾಲದಲ್ಲಿ ಎಲ್ಲ ಮಲೆಯಾಳಿಗಳು ತಮ್ಮ ರಾಜನನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ.
ಓಣಂ ಅನ್ನು ಸುಗ್ಗಿಯ ಹಬ್ಬ ಎಂದೂ ಕರೆಯುತ್ತಾರೆ. ಓಣಂ ಸಮಯದಲ್ಲಿ ಜನರು ಬಣ್ಣಬಣ್ಣದ ವಿವಿಧ ಹೂವುಗಳ ಬಗೆಬಗೆಯ ವಿನ್ಯಾಸಗಳ ಚಿತ್ತಾಕರ್ಷಕ ರಂಗೋಲಿ (ಪೂಕಲಂ) ಗಳನ್ನು ಮನೆಯ ಮುಂದೆ ರಚಿಸುತ್ತಾರೆ. ಓಣಂ ಹಬ್ಬವು ಸಮೃದ್ಧಿ ಮತ್ತು ಏಳಿಗೆಯ ಪ್ರತೀಕವಾಗಿದ್ದು ಹೂವಿನ ರಂಗೋಲಿಗಳು ಅಂತಹ ಭಾವವನ್ನು ಉಂಟುಮಾಡುತ್ತವೆ. ಮಹಿಳೆಯರು ಚಿನ್ನದ ಆಭರಣಗಳು ಮತ್ತು ಹೊಸ ಬಟ್ಟೆಗಳಿಂದ ತಮ್ಮನ್ನು ಶೃಂಗರಿಸಿಕೊಳ್ಳುತ್ತಾರೆ. ಓಣಂ ಆಚರಣೆಯ ಪ್ರತಿಯೊಂದು ಕ್ಷಣವೂ ಗತವೈಭವವನ್ನು ನೆನಪಿಸುತ್ತದೆ. ʼಸದ್ಯಾʼ ಎಂಬ ರುಚಿಕರವಾದ, ಪುಷ್ಕಳವಾದ ಹಬ್ಬದೂಟವಾದ ನಂತರ ಸುಂದರವಾದ ʼಕೈಕೊಟ್ಟಿಕಳಿʼ ನೃತ್ಯ, ತುಂಬಿ ತುಳ್ಳಲ್, ಕುಮ್ಮಾಟಿಕಳಿ ಮತ್ತು ಪುಲಿ ಕಳಿ (ಹುಲಿ ವೇಷ) ಯಂತಹ ಇತರ ಜಾನಪದ ನೃತ್ಯಗಳಲ್ಲಿ ಜನರು ಉತ್ಸಾಹದಿಂದ ಭಾಗವಹಿಸುತ್ತಾರೆ.
ಓಣಂ ಹಬ್ಬವು ಅಸುರರ ರಾಜನಾಗಿದ್ದ ಮಹಾ ಬಲಿಯು ಪಾತಾಳ ಲೋಕದಿಂದ ತನ್ನ ರಾಜ್ಯಕ್ಕೆ ಮರಳುವುದರ ಸಂಕೇತವಾಗಿ ಆಚರಿಸಲ್ಪಡುತ್ತದೆ.

ಮಹಾ ಬಲಿಯು ಪ್ರಹ್ಲಾದನ ಮೊಮ್ಮಗ. ಈತ ಸ್ವಯಂ ಮಹಾಜ್ಞಾನಿಯಾಗಿದ್ದನಲ್ಲದೆ ಜ್ಞಾನಿಗಳನ್ನೂ ಗೌರವಿಸುತ್ತಿದ್ದ. ಒಮ್ಮೆ, ಮಹಾ ಬಲಿಯು ಒಂದು ಯಜ್ಞವನ್ನು ಮಾಡುತ್ತಿದ್ದಾಗ, ಕುಳ್ಳಗಿನ, ತೇಜಸ್ವಿಯಾಗಿದ್ದ ಬಾಲಕನೊಬ್ಬ ಯಜ್ಞಶಾಲೆಯನ್ನು ಪ್ರವೇಶಿಸುತ್ತಾನೆ. ಮಹಾ ಬಲಿಯು ಸಂಪ್ರದಾಯದಂತೆ ಆ ತೇಜಸ್ವಿ ಬಾಲಕನನ್ನು ಸ್ವಾಗತಿಸಿ, ಅವನಿಗೆ ಏನು ಬೇಕು ಎಂದು ಕೇಳುತ್ತಾನೆ. ಪ್ರತಿಯಾಗಿ ಆ ಚಿಕ್ಕ ಹುಡುಗ ತನ್ನ ಮೂರು ಹೆಜ್ಜೆಗಳಿಂದ ಅಳೆಯಬಹುದಾದಷ್ಟು ಜಾಗವನ್ನು ತನಗೆ ದಾನವಾಗಿ ನೀಡುವಂತೆ ಕೋರುತ್ತಾನೆ.
“ಈ ಬಾಲಕನ ರೂಪದಲ್ಲಿ ಬಂದಿರುವವನು ಮಹಾವಿಷ್ಣುವಲ್ಲದೆ ಬೇರಾರೂ ಅಲ್ಲ” ಎಂದು ಗುರು ಶುಕ್ರಾಚಾರ್ಯರು ಎಚ್ಚರಿಸುತ್ತಿದ್ದರೂ ಕೇಳದೆ ಮಹಾ ಬಲಿಯು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳುತ್ತಾನೆ.
ಮಹಾ ಬಲಿಯು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ನೀಡಲು ಒಪ್ಪಿಕೊಳ್ಳುತ್ತಿರುವಂತೆ ವಾಮನನು ತ್ರಿವಿಕ್ರಮನಾಗಿ ಬೃಹದಾಕಾರವನ್ನು ತಳೆಯುತ್ತಾನೆ. ತನ್ನ ಒಂದು ಹೆಜ್ಜೆಯಿಂದ ಇಡೀ ಭೂಮಂಡಲವನ್ನೂ ಎರಡನೆಯ ಹೆಜ್ಜೆಯಿಂದ ಆಕಾಶವನ್ನೂ ಅಳೆದುಬಿಡುತ್ತಾನೆ. ಇಲ್ಲಿಗೆ ಭೂಮ್ಯಾಕಾಶಗಳಲ್ಲಿ ವ್ಯಾಪಿಸಿದ್ದ ಮಹಾ ಬಲಿಯ ಸಾಮ್ರಾಜ್ಯವನ್ನು ಎರಡು ಹೆಜ್ಜೆಗಳಲ್ಲೇ ಸಂಪೂರ್ಣವಾಗಿ ಅಳೆದುಬಿಟ್ಟಾಯಿತು. ಈಗ ಮೂರನೇ ಹೆಜ್ಜೆಯನ್ನು ಎಲ್ಲಿಡಲಿ? ಎಂದು ವಾಮನ ಮಹಾ ಬಲಿಯನ್ನು ಕೇಳುತ್ತಾನೆ.
ಪರಮ ಭಕ್ತ, ಪ್ರಹ್ಲಾದನ ಮೊಮ್ಮಗನಾದ ಮಹಾ ಬಲಿಯು ಸಂತೋಷದಿಂದ ಪರಮಭಕ್ತಿ ಮತ್ತು ಶರಣಾಗತಿಯ ಉನ್ನತ ನಿದರ್ಶನವಾಗಿ ತನ್ನ ತಲೆಯನ್ನೇ ಅರ್ಪಿಸುತ್ತಾನೆ.
ಮಹಾ ಬಲಿಯ ಶರಣಾಗತಿಯ ಭಾವವನ್ನು ಮೆಚ್ಚಿ ಸಂಪ್ರೀತನಾದ ಮಹಾವಿಷ್ಣುವು ಅವನನ್ನು ಪಾತಾಳ ಲೋಕಕ್ಕೆ ಕಳಿಸುತ್ತಾನೆ. ಹಾಗೆ ಕಳಿಸುವಾಗ ಮಹಾ ಬಲಿಯ ಪಾತಾಳ ಲೋಕದ ದ್ವಾರಗಳನ್ನು ತಾನೇ ರಕ್ಷಿಸುವುದಾಗಿಯೂ ಜೊತೆಗೆ ಮುಂದಿನ ಮನ್ವಂತರದಲ್ಲಿ ಅವನಿಗೆ ಇಂದ್ರ ಪದವಿಯನ್ನು ಕರುಣಿಸುವುದಾಗಿಯೂ ಭರವಸೆ ನೀಡುತ್ತಾನೆ. ಅವನ ಪ್ರಜೆಗಳ ಕೋರಿಕೆಯ ಮೇರೆಗೆ ವರ್ಷಕ್ಕೊಮ್ಮೆ ಪಾತಾಳ ಲೋಕದಿಂದ ಮರಳಿ ತನ್ನ ಜನರ ನಡುವೆ ಇರಲು ಮಹಾ ಬಲಿಗೆ ಮಹಾವಿಷ್ಣು ಅನುಮತಿ ನೀಡುತ್ತಾನೆ. ಹೀಗೆ ಮಹಾ ಬಲಿಯು ಮರಳುವ ದಿನವನ್ನೇ ಇಂದು ಓಣಂ ಹಬ್ಬವಾಗಿ ಆಚರಿಸಲಾಗುತ್ತಿದೆ.
ಪುರಾಣ ಕಥೆಯ ಸಾಂಕೇತಿಕತೆ
ವಾಮನ ಅವತಾರದ ಈ ಕಥೆಯು ಐತಿಹಾಸಿಕ ಅಥವಾ ವೈಜ್ಞಾನಿಕ ಘಟನೆಗಳ ನೈತಿಕ ಪಾಠಗಳನ್ನು ಒಳಗೊಂಡ ಒಂದು ಪುರಾಣಕಥೆಯಾಗಿದೆ. ಗಹನವಾದ ಸತ್ಯವು ಇದರಲ್ಲಿ ಅಡಕವಾಗಿದೆ. ಮಹಾ ಬಲಿ ಅಸುರರ ಅತಿ ಬಲಿಷ್ಠ ರಾಜನಾಗಿದ್ದ. ಇಡೀ ಜಗತ್ತು ಅವನ ಆಳ್ವಿಕೆಗೆ ಒಳಪಟ್ಟಿತ್ತು. ಆ ಕಾಲದಲ್ಲಿ ಅವನನ್ನು ಗೆಲ್ಲಬಲ್ಲವರು ಯಾರೂ ಇರಲಿಲ್ಲ. ಹೀಗಾಗಿ ಸಹಜವಾಗಿಯೇ ಆತ ದುರಹಂಕಾರಿಯಾಗಿದ್ದ.
ಭೂಮ್ಯಾಕಾಶಗಳ ವಿಸ್ತಾರಕ್ಕೆ ಬೆಳೆಯಬಲ್ಲ ಅಹಂಕಾರವನ್ನು ಜ್ಞಾನ ಮತ್ತು ವಿನಯಗಳ ಮೂಲಕ ಮೀರಬಹುದು. ವಾಮನನು ಮೂರು ಹೆಜ್ಜೆಗಳಲ್ಲಿ ಜಗತ್ತನ್ನು ಅಳೆದಂತೆ, ಎತ್ತರಕ್ಕೆ ಬೆಳೆದ ಅಹಂಕಾರವನ್ನು ಮೂರು ಸರಳ ಹೆಜ್ಜೆಗಳ ಮೂಲಕ ಜಯಿಸಬಹುದು.
ಹೆಜ್ 1: ಭೂಮಿಯನ್ನು ಅಳೆಯುವುದು – ಸುತ್ತಲೂ ನೋಡಿ; ನಿಮ್ಮಂತೆಯೇ ಈ ಭೂಮಿಯ ಮೇಲಿರುವ ಜೀವಿಗಳ ಅಗಾಧ ಸಂಖ್ಯೆಯಯನ್ನು ಗಮನಕ್ಕೆ ತಂದುಕೊಂಡು ವಿನಯವನ್ನು ಹೊಂದಿರಿ.
ಹೆಜ್ 2: ಆಕಾಶವನ್ನು ಅಳೆಯುವುದು – ಆಕಾಶದತ್ತ ನೋಡಿ; ಅಗಾಧವಾದ ಬ್ರಹ್ಮಾಂಡದಲ್ಲಿರುವ ಅನೇಕ ಪ್ರಪಂಚಗಳನ್ನು ಗಮನಕ್ಕೆ ತಂದುಕೊಂಡು ಅದಕ್ಕೆ ಹೋಲಿಸಿದರೆ ನಾವೆಷ್ಟು ಕ್ಷುದ್ರರು ಎಂಬುದನ್ನು ಅರಿತು ವಿನಮ್ರರಾಗಿರಿ.
ಹೆಜ್ 3: ನಿಮ್ಮ ತಲೆಯ ಮೇಲೆ ನಿಮ್ಮ ಕೈಗಳನ್ನು ಇರಿಸಿ – ಬ್ರಹ್ಮಾಂಡದಲ್ಲಿರುವ ಜೀವಿಗಳ ಮಾತ್ರವಲ್ಲ, ಸ್ವತಃ ಬ್ರಹ್ಮಾಂಡದ ಜನನ-ಮರಣಗಳ ಚಕ್ರದ ಎದುರು ನಮ್ಮ ಪ್ರತಿಯೊಬ್ಬರ ಜೀವಿತಾವಧಿಯು ಅತ್ಯಂತ ಕನಿಷ್ಠವಾಗಿದೆ ಹಾಗೂ ಬ್ರಹ್ಮಾಂಡದ ಬೃಹತ್ ವ್ಯವಸ್ಥೆಯಲ್ಲಿ ನಮ್ಮ ಪಾತ್ರವೂ ನಗಣ್ಯ ಎಂದು ತಿಳಿಯಿರಿ.
ಶ್ರಾವಣ ಮಾಸದ ಮಹತ್ವ
ಓಣಂ ಎಂಬುದು ಭಾರತೀಯ ಪಂಚಾಂಗದ ಶ್ರಾವಣ ಮಾಸದಲ್ಲಿ ಬರುವ ಹಬ್ಬವಾಗಿದ್ದು ಇದು ತಿರುವೋಣಂ ಅಥವಾ ಶ್ರಾವಣಂ ಶಬ್ದಗಳ ಸಂಕ್ಷಿಪ್ತ ರೂಪವಾಗಿದೆ. ಭಾರತೀಯ ಪಂಚಾಂಗದ ಶ್ರಾವಣ ಮಾಸವು ಸಾಮಾನ್ಯವಾಗಿ ಉತ್ತರಭಾರತದಲ್ಲಿ ಜುಲೈ-ಆಗಸ್ಟ್ ನಡುವೆ ಮತ್ತು ದಕ್ಷಿಣದಲ್ಲಿ ಆಗಸ್ಟ್-ಸೆಪ್ಟೆಂಬರ್ ನಡುವೆ ಬರುತ್ತದೆ. ಈ ಮಾಸದಲ್ಲಿ ಹುಣ್ಣಿಮೆಯು ಶ್ರವಣ ನಕ್ಷತ್ರದಲ್ಲಿ ಉಂಟಾಗುವುದರಿಂದ ಈ ಮಾಸವನ್ನು ಶ್ರಾವಣ ಎಂದು ಕರೆಯಲಾಗುತ್ತದೆ.
ಆಕಾಶದಲ್ಲಿ ಮೂರು ಹೆಜ್ಜೆಗುರುತುಗಳು
ಶ್ರವಣ ನಕ್ಷತ್ರವನ್ನು ಪಾಶ್ಚಿಮಾತ್ಯ ಖಗೋಳ ಶಾಸ್ತ್ರದಲ್ಲಿ ಅಲ್ಟೇರ್ ಎಂದು ಕರೆಯುತ್ತಾರೆ. ಇದು ಅಕ್ವಿಲಾ ಎಂಬ ನಕ್ಷತ್ರಪುಂಜದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರವಾಗಿದ್ದು ಇದರ ಆಜುಬಾಜಿನಲ್ಲಿ ಬೀಟಾ ಮತ್ತು ಗಾಮಾ ಅಕ್ವಿಲೇ ನಕ್ಷತ್ರಗಳಿರುತ್ತವೆ. ಈ ಮೂರು ನಕ್ಷತ್ರಗಳನ್ನು ವಾಮನನ ತ್ರಿವಿಕ್ರಮ ಸ್ವರೂಪದ ಮೂರು ಹೆಜ್ಜೆಗಳು ಎಂಬಂತೆ ಚಿತ್ರಿಸಲಾಗಿದೆ. ಮಹಾ ಬಲಿ ಮತ್ತು ವಾಮನರಿಗೂ ಈ ನಕ್ಷತ್ರದ ಶ್ರವಣ ಎಂಬ ಹೆಸರಿಗೂ ಏನು ಸಂಬಂಧ ಎಂದು ಕೆಲವರು ಕೇಳಬಹುದು. ಶ್ರವಣ ಎಂದರೆ ಕೇಳಿಸಿಕೊಳ್ಳುವುದು, ಲಕ್ಷಿಸುವುದು. ಆಕಾಶದಲ್ಲಿರುವ ಈ ಮೂರು ನಕ್ಷತ್ರಗಳು ಮಹಾ ಬಲಿಯ ಅವಿಧೇಯತೆಯ ಪರಿಣಾಮ ಏನಾಯಿತೆಂಬುದರ ಸಂಕೇತವಾಗಿದ್ದು ಸಜ್ಜನರ ಉತ್ತಮ ಸಲಹೆಗಳನ್ನು ಕೇಳಿಸಿಕೊಳ್ಳುವಂತೆ ಮತ್ತು ಪಾಲಿಸುವಂತೆ ಜನರಿಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿವೆ.











