ನಿಮ್ಮ ಇಚ್ಛಾಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸುವಿರಾದರೆ ಪ್ರೀತಿಸುವುದನ್ನು ಕಲಿಯಿರಿ
ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ನಮಗೆ ತಿಳಿದಿದೆ. ಆದರೂ ಇಚ್ಛಾಶಕ್ತಿಯೇ ನಮ್ಮಲ್ಲಿಲ್ಲ ಎಂದು ನಮಗೆ ಆಗಾಗ ಅನಿಸುತ್ತದೆ.
ನಿಮ್ಮಲ್ಲಿ ಇಚ್ಛಾಶಕ್ತಿ ನಿಜವಾಗಿಯೂ ಇಲ್ಲದಿದ್ದರೆ ʼಇಚ್ಛಾಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?ʼ ಎಂಬ ವಿಷಯದ ಬಗ್ಗೆಯೂ ನಿಮಗೆ ಆಸಕ್ತಿಯಿರುತ್ತಿರಲಿಲ್ಲ. ನೀವು ನಿಮ್ಮಲ್ಲಿ ಉದಿಸುವ ಪ್ರತಿಯೊಂದು ವಿಚಾರಕ್ಕೂ ಮೂರ್ತರೂಪ ಕೊಡುತ್ತೀರಿ ಎಂಬುದೇ ನಿಮ್ಮಲ್ಲಿ ಇಚ್ಛಾಶಕ್ತಿ ಇರುವುದನ್ನು ಸೂಚಿಸುತ್ತದೆ. ಉದಾಹರಣೆಗೆ, ʼಎದ್ದು ಪಕ್ಕದ ಕೋಣೆಗೆ ಹೋಗಬೇಕುʼ ಎಂಬ ವಿಚಾರ ನಿಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ; ಆಗ ನೀವು ಪಕ್ಕದ ಕೋಣೆಗೆ ಹೋಗುತ್ತೀರಿ. ಇದೇ ಇಚ್ಛಾಶಕ್ತಿ. ಹೀಗೆ ನೋಡಿದರೆ, ಇಚ್ಛಾಶಕ್ತಿ ಇಲ್ಲದಿರುವುದು ಸಾಧ್ಯವೇ ಇಲ್ಲ.
ನೀವು ಬಯಸಿದಂತೆ ಕೆಲವೊಮ್ಮೆ ನಡೆಯದಿರಬಹುದು. ಇದಕ್ಕೆ ನಿಮ್ಮ ಮನಸ್ಸು ಕೆಲವು ಹವ್ಯಾಸಗಳಿಗೆ ಅಥವಾ ಕೆಲವು ಆಕರ್ಷಣೆಗಳಿಗೆ ಒಳಗಾಗಿರುವುದೇ ಕಾರಣ. ಅಂತಹ ಸಂದರ್ಭಗಳಲ್ಲಿ ನೀವು ʼನನ್ನಲ್ಲಿ ಇಚ್ಛಾಶಕ್ತಿಯೇ ಇಲ್ಲʼ ಎಂದು ಭಾವಿಸುತ್ತೀರಿ. ಅದು ಸರಿಯಲ್ಲ, ನಿಮ್ಮಲ್ಲಿ ಇಚ್ಛೆ ಇರುವವರೆಗೆ ಶಕ್ತಿಯೂ ಇರುತ್ತದೆ.
ʼನನ್ನಲ್ಲಿ ಇಚ್ಛಾಶಕ್ತಿ ಇಲ್ಲʼ ಎಂದು ಭಾವಿಸಿಕೊಂಡಾಗಲೇ ನೀವು ಕೈ ಚೆಲ್ಲಿರುತ್ತೀರಿ. ʼನಾನು ದುರ್ಬಲʼ ಎಂಬ ಹಣೆ ಪಟ್ಟಿಯನ್ನು ನೀವಾಗಿಯೇ ಅಂಟಿಸಿಕೊಂಡಿರುತ್ತೀರಿ.
ಅದರ ಬದಲು ನಿಮ್ಮೊಳಗಿನ ಕ್ಷಾತ್ರವನ್ನು ಆವಾಹನೆ ಮಾಡಿಕೊಳ್ಳಿ. ಒಂದು ದೃಢ ನಿರ್ಧಾರ ತೆಗೆದುಕೊಳ್ಳಿ. ನಿಮಗೆ ಬೇಕಾದ ಶಕ್ತಿಗಳೆಲ್ಲ ನಿಮ್ಮಲ್ಲಿವೆ; ಮತ್ತು ಅವೆಲ್ಲವೂ ನಿಮಗೆ ಅಗತ್ಯವಿದ್ದಾಗ ನೆರವಿಗೆ ಬರುತ್ತವೆ. ನಿಮ್ಮಲ್ಲಿ ಶಕ್ತಿ ಮತ್ತು ಸಾಮರ್ಥ್ಯದ ಕೊರತೆಯಿಲ್ಲ.
30 ದಿನಗಳವರೆಗೆ ಪ್ರಾಣಾಯಾಮ ಮಾಡಿದರೆ 10 ಲಕ್ಷ ರೂಪಾಯಿ ದೊರೆಯುತ್ತದೆ ಎಂದು ಯಾರಾದರೂ ನಿಮಗೆ ಹೇಳಿದರೆ ನೀವು ಒಂದು ದಿನವೂ ತಪ್ಪಿಸದೆ, ನಿದ್ರೆ, ಆಹಾರಗಳನ್ನು ಬಿಟ್ಟರೂ ಪ್ರಾಣಾಯಾಮವನ್ನು ಬಿಡುವುದಿಲ್ಲ ಲೋಭವು ನಿಮ್ಮೊಳಗೆ ಅಂತಹ ಶಕ್ತಿಯನ್ನು ಹುಟ್ಟಿಸಬಹುದು. ಅದೇ ರೀತಿ ಭಯ. ಪ್ರಾಣಾಯಾಮ ಮಾಡದಿದ್ದರೆ ನಿಮಗೆ ಕಾಯಿಲೆ ಬರುತ್ತದೆ ಎಂದು ಯಾರಾದರೂ ಹೇಳಿದರೆ ಆಗಲೂ ನೀವು ಪ್ರಾಣಾಯಾಮ ಮಾಡುವುದನ್ನು ತಪ್ಪಿಸುವುದಿಲ್ಲ. ಪ್ರೇಮ, ಲೋಭ ಮತ್ತು ಭಯಗಳು ನಿಮ್ಮ ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತವೆ.
ಕೋಟಿ ರೂಪಾಯಿ ಪ್ರಶ್ನೆ
ಒಂದು ತಿಂಗಳು ಅಥವಾ 30 ದಿನ ಬೀಡಿ-ಸಿಗರೇಟು ಸೇದದಿದ್ದರೆ ಒಂದು ಕೋಟಿ ರೂಪಾಯಿ ಕೊಡುತ್ತೇವೆ ಎಂದು ಯಾರಾದರೂ ನಿಮಗೆ ಹೇಳಿದರು ಎಂದಿಟ್ಟುಕೊಳ್ಳಿ. ಆಗ ನೀವು 30 ದಿನವೇಕೆ, ಕೆಲವು ತಿಂಗಳಲ್ಲಿ 31 ದಿನಗಳೂ ಇರುತ್ತವೆ, ಫೆಬ್ರುವರಿಯಲ್ಲಿ ಕಡಿಮೆ ದಿನಗಳಿರುತ್ತವೆ, ಹಣ ದೊರೆಯುವುದು ಖಚಿತವಾದರೆ ನಾನು 35 ದಿನ ಬೇಕಾದರೂ ಸಿಗರೇಟ್ ಸೇದುವುದಿಲ್ಲ ಎಂದು ಹೇಳುತ್ತೀರಿ.
ಅಹಂಕಾರ, ಪ್ರೀತಿ, ಶ್ರದ್ಧೆ ಅಥವಾ ಲೋಭಗಳಿಲ್ಲದವರಲ್ಲಿ ಇಚ್ಛಾಶಕ್ತಿ ತುಂಬಾ ಕಡಿಮೆಯಿರುತ್ತದೆ.
– ಗುರುದೇವ್ ಶ್ರೀ ಶ್ರೀ ರವಿಶಂಕರ್
ನಿಮ್ಮ ಹವ್ಯಾಸಗಳಿಗಿಂತ ಅಮೂಲ್ಯವಾದ ಯಾವುದೋ ಒಂದು ನಿಮಗೆ ದೊರೆಯುತ್ತದೆ ಎಂದು ಖಾತ್ರಿಯಾದಾಗ ಹವ್ಯಾಸಗಳು ಮಾಯವಾಗುತ್ತವೆ. ಎಯ್ಡ್ಸ್ ಕಾಯಿಲೆಯ ಭಯದಿಂದಲೂ ಪರಸ್ತ್ರೀ ವ್ಯಾಮೋಹ ತುಂಬಾ ಕಡಿಮೆಯಾಗಿದೆ. ಒಂದು ಹಿರಿದಾದ ಉದ್ದೇಶಕ್ಕೆ ಬದ್ಧರಾಗುವುದರಿಂದಲೂ ನೀವು ಕ್ಷುದ್ರ ಆಕರ್ಷಣೆಗಳಿಂದ ಪಾರಾಗಬಹುದು.
ನೀವು ಕೇವಲ ಬೌದ್ಧಿಕವಾಗಿ ಯಾವುದು ಒಳ್ಳೆಯದು ಮತ್ತು ಯಾವುದನ್ನು ಮಾಡಬೇಕು ಎಂದು ಚಿಂತಿಸುತ್ತಿರುತ್ತೀರಿ. ಆಗ ನೀವು ವಿಷಯಗಳನ್ನು ಲಘುವಾಗಿ ಪರಿಗಣಿಸುವ ಸಾಧ್ಯತೆಯಿದೆ. ಅಥವಾ ಸಾಧ್ಯಾಸಾಧ್ಯತೆಗಳ ಬಗ್ಗೆ ಹೆಚ್ಚು ಚಿಂತಿಸಿದಾಗ ನೀವು ನಿಮ್ಮ ಅನುಕೂಲ ವಲಯಗಳಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆಯಿರುತ್ತದೆ. ಅಂತಹ ಸಂದರ್ಭಗಳಲ್ಲಿಯೂ ನಿಮ್ಮ ಇಚ್ಛಾಶಕ್ತಿ ಕಡಿಮೆಯಾಗುತ್ತದೆ. ನಿಮ್ಮ ಕ್ಷಾತ್ರವನ್ನು ಹೆಚ್ಚಿಸಿಕೊಳ್ಳಿ; ಉದ್ದೇಶದ ಮೇಲೆ ಹೃದಯಪೂರ್ವಕವಾದ ಪ್ರೀತಿಯನ್ನು ಬೆಳೆಸಿಕೊಳ್ಳಿ. ಒಂದು ಉದ್ದೇಶದ ಮೇಲೆ ಶ್ರದ್ಧೆ, ಭಯ ಮತ್ತು ಲೋಭ – ಇವು ನಿಮ್ಮ ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತವೆ.
ಅಹಂಕಾರವಿರುವ ಜನರಲ್ಲಿ ಕ್ಷಾತ್ರವಿರುತ್ತದೆ. ಅವರನ್ನು ಸುಲಭವಾಗಿ ಒಪ್ಪಿಸಿ ಆಲಸ್ಯದಿಂದ ಹೊರ ತರಬಹುದು. ಅಹಂಕಾರವಿಲ್ಲದ ಜನರಲ್ಲಿ ಪ್ರೇಮ ಮತ್ತು ಶರಣಾಗತಿಯ ಭಾವ ಅಧಿಕವಾಗಿರುತ್ತದೆ. ಅವರಿಗೂ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳುವುದು ಸುಲಭ. ಅಹಂಕಾರ, ಪ್ರೇಮ, ಶ್ರದ್ಧೆ ಅಥವಾ ಲೋಭವಿಲ್ಲದ ಜನರಲ್ಲಿ ಇಚ್ಛಾಶಕ್ತಿ ಯಾವಾಗಲೂ ಕಡಿಮೆಯಿರುತ್ತದೆ.
ನೀವು ಲೋಭಿಯಾಗಿ ಅಥವಾ ನಿಮ್ಮಲ್ಲಿ ಕೊಂಚ ಭಯವಿರಲಿ. ಅಥವಾ ನಿಮ್ಮ ಪ್ರೇಮವನ್ನು ಹೆಚ್ಚಿಸಿಕೊಂಡು ಶರಣಾಗತರಾಗಿ. ಯಥಾರ್ಥ ಜ್ಞಾನವನ್ನು ಹೊಂದುವುದರಿಂದ ನಿಮ್ಮ ಕ್ಷಾತ್ರವನ್ನು ಹೆಚ್ಚಿಸಿಕೊಳ್ಳಬಹುದು.
ಆಲಸ್ಯ ಯಾವಾಗ ದೂರವಾಗುತ್ತದೆ?
ಆಲಸ್ಯವು ನಿಮ್ಮಲ್ಲಿ ಇಚ್ಛಾಶಕ್ತಿಯೇ ಇಲ್ಲವೆಂಬ ಭಾವನೆಯನ್ನು ಹುಟ್ಟಿಸುತ್ತದೆ. ನಾಳೆ ಬೆಳಗ್ಗೆ 6 ಗಂಟೆಗೆ ಎದ್ದು ಪ್ರಾಣಾಯಾಮ ಮಾಡುತ್ತೇನೆ ಎಂದು ನಿರ್ಧರಿಸಿದ್ದೀರಿ ಎಂದುಕೊಳ್ಳಿ; ಆದರೆ ಬೆಳಗ್ಗೆ ಆರು ಗಂಟೆಗೆ ಎದ್ದಾಗ “ತುಂಬಾ ಚಳಿ! ಪ್ರಾಣಾಯಾಮವನ್ನು ನಾಳೆ ಅಥವಾ ಇಂದು ರಾತ್ರಿ ಮಾಡಿದರಾಯಿತು” ಎಂದುಕೊಳ್ಳುತ್ತೀರಿ. ಇದಕ್ಕೆ ಕಾರಣ, ನಿಮ್ಮ ದೇಹಪ್ರಕೃತಿ ದಣಿದಿರುತ್ತದೆ; ಮನಸ್ಸು ದಣಿದಿರುತ್ತದೆ; ನೀವು ಆರೋಗ್ಯಕರವಲ್ಲದ ಆಹಾರವನ್ನು ಸೇವಿಸುತ್ತಿದ್ದೀರಿ. ಈ ಆಲಸ್ಯವು ನಿಮಗೇ ಬೇಸರ ತರಿಸುವಷ್ಟರ ಮಟ್ಟಿಗೆ ಹೆಚ್ಚಾಗುತ್ತದೆ. ಆಗ, ಅಂತಿಮವಾಗಿ ಹಾಸಿಗೆಯಿಂದ ಮೇಲೆದ್ದು ಆಲಸ್ಯವನ್ನು ಹೋಗಲಾಡಿಸಲು ನೀವೇ ಏನನ್ನಾದರೂ ಮಾಡುತ್ತೀರಿ.
ಒಂದಲ್ಲ ಒಂದು ದಿನ ನಿಮ್ಮ ಆಲಸ್ಯವು ನಿಮಗೇ ಬೇಸರ ಉಂಟುಮಾಡುತ್ತದೆ. ಬೆಂಕಿ ಬಿದ್ದಿದೆ ಎಂದು ಯಾರಾದರೂ ಹೇಳಿದರೆ ನಿಮ್ಮ ಸೋಮಾರಿತನ ತಾನಾಗಿಯೇ ಮಾಯವಾಗುತ್ತದೆ. ಪರಿಸ್ಥಿತಿಯ ತುರ್ತು ನಿಮ್ಮ ಆಲಸ್ಯವನ್ನು ದೂರ ಮಾಡುತ್ತದೆ. ಅಥವಾ ನಿಮ್ಮ ಹೃದಯದ ಗ್ರಂಥಿ (ಗಂಟು) ಬಿಚ್ಚಿಕೊಳ್ಳುತ್ತದೆ. ನಿಮ್ಮ ಹೃದಯದಲ್ಲಿ ಪ್ರೇಮ ಉಕ್ಕತೊಡಗಿದಾಗ ಆಲಸ್ಯ ಮಾಯವಾಗುತ್ತದೆ. ನಿಮಗೆ ಯಾವುದಾದರೂ ವಿಷಯದ ಬಗ್ಗೆ ಅಥವಾ ಯಾವುದೇ ವ್ಯಕ್ತಿಯ ಬಗ್ಗೆ ಆಸಕ್ತಿ ಮೂಡಿದಾಗ ನೀವು ಏಕಾಏಕಿ ಜಾಗೃತರಾಗುತ್ತೀರಿ; ನಿಮ್ಮಲ್ಲಿ ಚೈತನ್ಯ ಮೂಡುತ್ತದೆ. ಪ್ರೇಮದ ಮೂಲಕ, ಭಯ ಅಥವಾ ಲೋಭದ ಮೂಲಕ ಆಲಸ್ಯವನ್ನು ನೀವು ದೂರ ಮಾಡಬಹುದು. ಇವು ಯಾವುವೂ ಇಲ್ಲದಿದ್ದರೆ ನೀವು ಕಾಲಹರಣ ಮಾಡುತ್ತೀರಿ. ಕಾಲಹರಣ ಮಾಡುವಾಗ ಒಂದು ಹಂತದಲ್ಲಿ ಭಯ ಉಂಟಾಗುತ್ತದೆ. ಆಗ ಆ ಭಯದಿಂದಲೂ ನೀವು ಕ್ರಿಯಾಶೀಲರಾಗುತ್ತೀರಿ.
ಕಾಲಹರಣ ಪ್ರವೃತ್ತಿಯಿಂದ ಪಾರಾಗಲು ಪ್ರೇಮ ಒಂದು ಉತ್ತಮ ಸಾಧನ. ನಿಮ್ಮ ಅಣ್ಣನನ್ನು ಅಥವಾ ಅಣ್ಣನ ಮಗಳನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರಲು ಬೆಳ್ಳಂಬೆಳಗ್ಗೆ ಬರುತ್ತೇನೆ ಎಂದು ತಿಳಿಸಿದ್ದೀರಿ ಎಂದಿಟ್ಟುಕೊಳ್ಳಿ. ಬೆಳಿಗ್ಗೆ ನಿಮ್ಮಲ್ಲಿ ಎಷ್ಟೇ ಆಲಸ್ಯ ಕಾಣಿಸಿಕೊಂಡರೂ ಎದ್ದು ಹೋಗಿ ಧಾವಂತದಿಂದ ಅವರನ್ನು ಭೇಟಿಯಾಗುತ್ತೀರಿ. ಆಗ ನಿಮಗೇ ತಿಳಿಯದಂತೆ ನಿಮ್ಮಲ್ಲಿ ಚೈತನ್ಯ ಉದಿಸಿರುತ್ತದೆ.











