ಪತಂಜಲಿ ಯೋಗಸೂತ್ರಗಳು : ಶ್ರೀ ಶ್ರೀ ರವಿಶಂಕರ್ ಅವರಿಂದ ವ್ಯಾಖ್ಯಾನ

ನಾವು ಒಂದು ಕಥೆಯೊಂದಿಗೆ ಪ್ರಾರಂಭಿಸೋಣ. ಏಕೆಂದರೆ ಜ್ಞಾನವನ್ನು ನೀಡಲು ಸುಲಭ, ಸರಳ ಮತ್ತು ಅಷ್ಟೇ ಪ್ರಭಾವಶಾಲಿಯಾದ ಕಥೆ


ಒಂದಾನೊಂದು ಕಾಲದಲ್ಲಿ, ಬಹಳ ಹಿಂದೆ ಎಲ್ಲ ಋಷಿ ಮುನಿಗಳು ಭಗವಾನ್ ಶ್ರೀ ಮಹಾವಿಷ್ಣುವಿನಲ್ಲಿಗೆ ಹೋದರು.
ಶ್ರೀ ವಿಷ್ಣವು ಧನ್ವಂತರಿ ಅವತಾರವನ್ನೆತ್ತಿ ವ್ಯಾಧಿಗಳನ್ನು ಗುಣಪಡಿಸಲು ಆಯುರ್ವೇದದ ಮೂಲಕ ಉಪಾಯಗಳನ್ನು ಕೊಟ್ಟಿದ್ದರೂ ಜನರು ಇನ್ನೂ ಸಹ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಜನರು ರೋಗಗ್ರಸ್ತರಾದಾಗ ಮತ್ತೇನು ಮಾಡಬೇಕೆಂದು ಕೇಳಿ ತಿಳಿಯಲು ಶ್ರೀ ವಿಷ್ಣುವಿನಲ್ಲಿಗೆ ಹೋದರು

ಕೆಲವು ಸಾರಿ ಕೇವಲ ದೈಹಿಕ (ಶಾರೀರಕ) ಅನಾರೋಗ್ಯ ಮಾತ್ರವೇ ಅಲ್ಲ, ಮಾನಸಿಕ ಮತ್ತು ಭಾವೋದ್ವೇಗಗಳ ಅನಾರೋಗ್ಯ (ಖಾಯಿಲೆ) ವನ್ನೂ  ಗುಣಪಡಿಸುವ ಅವಶ್ಯಕತೆ ಇದೆ. ಕಾಮ, ಕ್ರೋಧ, ಲೋಭ, ಮತ್ಸರ, ಮುಂತಾದವುಗಳು ಈ ಮಲಿನತೆಗಳಿಂದ ಹೇಗೆ ಮುಕ್ತರಾಗುವುದು ? ಇದಕ್ಕೇನು ಉಪಾಯ ?

ಭಗವಾನ್ ಶ್ರೀ ವಿಷ್ಣುವು 1000 ಹೆಡೆಗಳುಳ್ಳ ಆದಿಶೇಷ ಮೇಲೆ ಮಲಗಿದ್ದನು. ಋಷಿಮುನಿಗಳು ಇದನ್ನು ಕೇಳಿದಾಗಿ
ಶ್ರೀ ಮಹಾವಿಷ್ಣುವು ಅವರ ಜೊತೆ ಆದಿಶೇಷನನ್ನು (ಅರಿವು ಮತ್ತು ಎಚ್ಚರಗಳ ಗುರುತು) ಕಳುಹಿಸಿಕೊಟ್ಟನು. ಆದಿಶೇಷನು ಭೂಮಿಯಲ್ಲಿ ಮಹರ್ಷಿ ಪತಂಜಲಿಯಾಗಿ ಹುಟ್ಟಿದನು. (ಆವಂತರಿಸಿದನು)

ಆದ್ದರಿಂದ ಪತಂಜಲಿ ಮಹರ್ಷಿಯು ಜನರಿಗೆ ಯೋಗದ ಬಗ್ಗೆ ಜ್ಞಾನವನ್ನು ಕೊಡಲು ಭೂಮಿಗೆ ಬಂದನು. ಅವುಗಳೇ ಯೋಗ ಸೂತ್ರಗಳು.

ಪತಂಜಲಿಯು 1000 ಜನ ಒಟ್ಟಿಗೆ ಸೇರಿದಲ್ಲಿ ಮಾತ್ರ  ಈ ಜ್ಞಾನ ನೀಡುವುದಾಗಿ ಹೇಳಿದನು. ಆದ್ದರಿಂದ 1000 ವಿದ್ಯಾರ್ಥಿಗಳು ಈ ಪತಂಜಲಿ ಮಹರ್ಷಿಯಿಂದ ಈ ವಿಂಧ್ಯಾಚಲ ಪರ್ವತದ ದಕ್ಷಿಣ ಭಾಗದಲ್ಲಿ ಸೇರಿದರು.

ಪತಂಜಲಿಯವರದು ಇನ್ನೂ ಒಂದು ಷರತ್ ಇತ್ತು. ತನ್ನ ಮತ್ತು ಆ ಸಾವಿರ ಜನ ವಿದ್ಯಾರ್ಥಿಗಳ ಮಧ್ಯೆ ಪರದೆಯನ್ನು ಹಾಕುವುದಾಗಿಯೂ ಮತ್ತು ಮಧ್ಯದಲ್ಲಿ ಯಾರೂ ಯಾವ ಕಾರಣಕ್ಕಾಗಿಯೂ ಆ ಪರದೆಯನ್ನು ತೆಗಯಬಾರದು ಮತ್ತು ಅಲ್ಲಿಂದ ಏಳಬಾರದು ಎಂದು ಹೇಳಿದನು ಅವನು ತನ್ನ ಜ್ಞಾನ ಪಾಠವನ್ನು ಮುಗಿಸುವ ತನಕ ಎಲ್ಲರೂ ಅಲ್ಲಿಯೇ ಇರಬೇಕೆಂದು ಕಟ್ಟುನಿಟ್ಟಾಗಿ ಹೇಳಿದನು.

ಪತಂಜಲಿ ಮಹರ್ಷಿಯು ಪರದೆಯ ಹಿಂದಿನಿಂದ ಅಲ್ಲಿ ಸೇರಿದ್ದ 1000 ವಿದ್ಯಾರ್ಥಿಗಳಿಗೂ ಆ ಜ್ಞಾನವನ್ನು ನೀಡಿದರು. ಪ್ರತಿಯೊಬ್ಬರೂ ತಮಗೆ ಆ ಜ್ಞಾನ ಲಭಿಸುತ್ತಿರುವುದನ್ನು ಅನುಭವಿಸಿದರು. ಅದು ಒಂದು ಅತ್ಯಾಶ್ಚರ್ಯಕರವಾದ ವಿಧಾನವಾಗಿತ್ತು. ತಮಗೆ ಹೇಗೆ ಜ್ಞಾನ ಉಂಟಾಗುತ್ತಿದೆ ಎಂಬುದನ್ನು ತಿಳಿಯದೆ ಎಲ್ಲರೂ ಮೂಕವಿಸ್ಮಿತರಾಗಿದ್ದರು. ಒಂದು ವಾಕ್ಯವನ್ನೂ ಹೇಳದೆ ಪರದೆಯ ಹಿಂದಿನಿಂದ ಗುರುಗಳು ಪ್ರತಿಯೊಬ್ಬರಿಗೂ ಹೇಗೆ ಜ್ಞಾನವನ್ನು ತಿಳಿಯುವಂತೆ ಮಾಡುತ್ತದ್ದಾರೆಂಬುದನ್ನು ತಿಳಿಯದವರಾಗಿದ್ದರು.

ಪ್ರತಿಯೊಬ್ಬರೂ ಆಶ್ಚರ್ಯ ಚಕಿತರಾಗಿದ್ದರೂ. ಪ್ರತಿಯೊಬ್ಬರೂ ಆ ಶಕ್ತಿಯ ಪ್ರವಾಹವನ್ನು ಅನುಭವಿಸುತ್ತಿದ್ದರು. ಆ ಉತ್ಸಾಹದ ಮಹಾಪೂರವನ್ನು ಅವರಿಗೆ ತಡೆದುಕೊಳ್ಳಲಾಗುತ್ತಿರಲಿಲ್ಲ. ಆದರೂ ಅವರು ಶಿಸ್ತನ್ನು ಪಾಲಿಸಬೇಕಾಗಿತ್ತು.


ಅವರಲ್ಲಿದ್ದ ಒಬ್ಬ ಚಿಕ್ಕ ಹುಡುಗನು ಪ್ರಕೃತಿಯ ಕರೆಗೆ ಒಗ್ಗೂಡಬೇಕಾಗಿತ್ತು. (ಮೂತ್ರ ವಿಸರ್ಜನೆಗೆ ಹೋಗಬೇಕಾಗಿತ್ತು).
ಯಾರಿಗೂ ಗೊತ್ತಾಗದಂತೆ ನಿಶ್ಶಬ್ಧವಾಗಿ ಹೊರಗೆ ಹೋಗಿ ಮತ್ತೆ ಬಂದು ಕುಳಿತುಕೊಳ್ಳೋಣವೆಂದು ಆಲೋಚಿಸಿದನು ಮತ್ತೊಬ್ಬನಿಗೆ ಕುತೂಹಲ ತಡೆದುಕೊಳ್ಳಲಾಗಲಿಲ್ಲ “ಗುರುಗಳು ಪರದೆಯ ಹಿಂದೆ ಕುಳಿತು ಏನು ಮಾಡುತ್ತಿದ್ದಾರೆ? ನಾನು ನೋಡಬೇಕು” ಎಂದುಕೊಂಡನು.

ಆ ಹುಡುಗನು ಪರದೆಯನ್ನು ಮೇಲೆತ್ತಿದ್ದಾನೆ?

ಮುಂದಿನ ಬುಧವಾರ ಮುಂದಿನ ‘ಪತಂಜಲಿ ಯೋಗ ಸೂತ್ರ’ದ ಜ್ಞಾನ ಪತ್ರದಲ್ಲಿ ತಿಳಿಯಿರಿ

ಈ ಕಥೆಯಿಂದ ಏನು ಪಾಠ ಕಲಿತಿರಿ?

ಈ ಕಥೆಯಲ್ಲಿ ಒಂದು ಗಹನವಾದ ಅರ್ಥವಿದೆ. ಪುರಾಣಗಳು ನಮಗೆ ವಿವರಣೆಯನ್ನು ಕೊಡುವುದಿಲ್ಲ. ಅವುಗಳು ಒಂದು ಸರಳವಾದ ಕಥೆಯ ಮೂಲಕ ಸಂದೇಶ. ನೀಡುತ್ತವೆ. ನಾವು ಅವುಗಳ ಹಿಂದಿನ ಅರ್ಥವನ್ನು ಬಿಡಿಸಬೇಕು, ಆದ್ದರಿಂದ ನಾವು ಇಲ್ಲಿ ಕಂಡುಕೊಳ್ಳಬೇಕಾದದ್ದು ಏನು ?

  • ಗುರುಗಳು ಒಂದು ಶಬ್ದವನ್ನು ಉಚ್ಛರಿಸದೆ ಪ್ರತಿಯೊಬ್ಬರಿಗೂ ಹೇಗೆ ಜ್ಞಾನವನ್ನು ನೀಡಿದರು ?
  • ಆ ಪರದೆಯ ಮಹತ್ವವೇನು ?