ಯೋಗ ಮಾಡಿ, ಇನ್ನೂ ಚೆನ್ನಾಗಿ ಓಡಿ:

ನೋವಿಲ್ಲ, ಲಾಭವೂ ಇಲ್ಲ!

ಏಳು ಬಾರಿ ಮಿ. ಒಲಂಪಿಯಾ ಬಿರುದಿನಿಂದ ಸಮ್ಮಾನಿತನಾದ ಅರ್ನಾಲ್ಡ್ ಶ್ವಾರ್ಜನೆಗ್ಗರ್ ತನ್ನ ವೃತ್ತಿಜೀವನದೆಲ್ಲೆಲ್ಲೋ ಒಂದೆಡೆ ಹೇಳಿದ ಈ ಉಕ್ತಿ ಇಂದು ವ್ಯಾಯಾಮ ಚಟುವಟಿಕೆಗಳ ಕುರಿತಾದ ಮನೋಭಾವವನ್ನು ವ್ಯಾಖ್ಯಾನಿಸುವ ಹೇಳಿಕೆಯಾಗಿ ಪ್ರಸಿದ್ದವಾಗಿದೆ. ಚುಟುಕಾದ, ಸಮಂಜಸವಾದ ಈ ಹೇಳಿಕೆ ಒಂದು ಹೇಳಿಕೆ ಹೇಗಿರಬೇಕು ಎನ್ನುವುದಕ್ಕೆ ಮಾದರಿ. ಆದರೆ ಹಾಗೆಂದ ಮಾತ್ರಕ್ಕೆ ನೋವು, ಶ್ರಮ ಎನ್ನುವುದು ಅಷ್ಟೊಂದು ಅಗತ್ಯವೇ ಎನ್ನುವುದು ಪ್ರಶ್ನೆ. ಒಂದೊಮ್ಮೆ ಯಾರಾದರೂ ಕನಿಷ್ಠ ನೋವಿನಿಂದ ಗರಿಷ್ಠ ಲಾಭ ಪಡೆಯುವ ವ್ಯಾಯಾಮ ವಿಧಾನವೊಂದನ್ನು ರೂಪಿಸಿದರೆ?  ನಂಬಲು ಆಗದಷ್ಟು ಒಳ್ಳೆಯ ಸಂಗತಿಯೆಂದು ತೋರುವುದೇ?
ಆಶ್ಚರ್ಯವೆಂದರೆ, ಹಾಗಿಲ್ಲ. ನಮಗೆಲ್ಲ ಉತ್ತಮ ಸದೃಢ ಶರೀರವನ್ನು ಪಡೆಯುವ ಆಲೋಚನೆ ಬಂದಾಗಲೆಲ್ಲ ಮೊಟ್ಟ ಮೊದಲು ಮನಸ್ಸಿಗೆ ಬರುವುದು ಓಡುವಿಕೆ. ಇದು ಹೆಚ್ಚುವರಿ ಮೈತೂಕವನ್ನು ಕಡಿಮೆ ಮಾಡಿಕೊಳ್ಳಲು ಬಹುತೇಕ ಜನರು ತೊಡಗಿಕೊಳ್ಳುವ ಅತ್ಯಂತ ಕಡಿಮೆ ಖರ್ಚಿನ ವಿಧಾನ. ಇದು ಶಕ್ತಿಯನ್ನೂ ವರ್ಧಿಸುತ್ತದೆ- ಅತ್ಯಂತ ಪರಿಪೂರ್ಣ  ಗೆಲುವು- ಗೆಲುವಿನ ಸಂದರ್ಭ.
ಆದರೆ ಜಾಗ್ರತೆಯಾಗಿ ಮುಂದುವರೆಯಬೇಕು. ಓಡುವುದರ ಪರ್ಯಾಯಪದವೇ ಸೊಂಟ, ತೊಡೆ, ಮಂಡಿ, ಕಾಲು, ಕಣಕಾಲು ಹಾಗೂ ಪಾದಗಳಿಗೆ ಆಗುವ ಪೆಟ್ಟು ಅಥವಾ ಹಾನಿ. ಓಡುವುದಕ್ಕೂ ಮೊದಲು ಕೈಕಾಲುಗಳನ್ನು ಹಿಗ್ಗಿಸುವ ವ್ಯಾಯಾಮವನ್ನು ಬಹುತೇಕ ತರಬೇತುದಾರರು ಶಿಫಾರಸ್ಸು ಮಾಡುತ್ತಾರಾದರೂ ಕೇವಲ ಹಿಗ್ಗಿಸುವ ಕ್ರಿಯೆಯೊಂದೇ ಸಾಕಾಗುವುದಿಲ್ಲ. ಒಬ್ಬ ಓಟಗಾರನಾದವನು ಶ್ರೀ ಶ್ರೀ ಯೋಗ ತರಗತಿಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ಮಿತಿಗಳನ್ನು ಹೆಚ್ಚಿಸಿಕೊಳ್ಳಲು ಉಪಯುಕ್ತವಾದ ಯೋಗಾಸನಗಳನ್ನು ಅರ್ಥ ಮಾಡಿಕೊಂಡು ಅವುಗಳಲ್ಲಿ ಕೆಲವು ಭಂಗಿಗಳನ್ನು ಕಲಿತು ಅಭ್ಯಾಸ ಮಾಡುವುದು ಒಳ್ಳೆಯದು. ನಡಿಗೆಯಂತ್ರದ ಮೇಲೆ ವ್ಯಾಯಾಮಕ್ಕೆ ತೊಡಗುವುದಕ್ಕೂ ಮೊದಲು ಪುರಾತನವಾದ ಈ ಯೋಗದ ಭಂಗಿಗಳಲ್ಲಿ ಕೆಲವೇ ನಿಮಿಷಗಳ ಕಾಲ ವಿಶ್ರಮಿಸುವುದರಿಂದ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

ಓಟಗಾರರ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿದ ಯೋಗದ ಈ ಹತ್ತು ಸರಳ ಆಸನಗಳು (ಭಂಗಿ) ದೇಹವನ್ನು ವೇಗದ ಓಟಕ್ಕೆ ಸಿದ್ಧ ಪಡಿಸುವಲ್ಲಿ ಸಹಾಯಕಾರಿಯಾಗುತ್ತವೆ.

1. ಬದ್ಧ ಕೋಣಾಸನ

ಇದು ಒಳಭಾಗದ ತೊಡೆ, ತೊಡೆ ಸಂದು, ಮಂಡಿ, ಮಂಡಿರಜ್ಜುಗಳಿಗೆ ಒಳ್ಳೆಯ ಹಿಗ್ಗುವಿಕೆಯನ್ನು ನೀಡುತ್ತದೆ. ಇದು ಪೃಷ್ಠ ಹಾಗೂ ತೊಡೆಯ ಸಂದುಗಳ ಬಾಗುವಿಕೆಯನ್ನೂ ಉತ್ತಮಗೊಳಿಸುತ್ತದೆ.

2. ಅರ್ಧ ಮತ್ಸ್ಯೇಂದ್ರಾಸನ

ಇದು ಬೆನ್ನೆಲುಬಿನ ಬಾಗುವಿಕೆ ಮತ್ತು ಹಿಗ್ಗುವಿಕೆಯನ್ನು ಉತ್ತಮಗೊಳಿಸುತ್ತದೆ.

3. ಹಸ್ತಪಾದಾಸನ

ಶರೀರದ ಹಿಂಭಾಗದ ಎಲ್ಲಾ ಸ್ನಾಯುಗಳ ಹಿಗ್ಗುವಿಕೆಗೆ ಸಹಕಾರಿ. ಕಿಬ್ಬೊಟ್ಟೆಯ ಅಂಗಗಳನ್ನು ಹುರಿಗೊಳಿಸುತ್ತದೆ ಹಾಗೂ ಬೆನ್ನೆಲುಬಿಗೆ ಮೃದುತ್ವವನ್ನು ತಂದುಕೊಡುತ್ತದೆ.

4. ಪ್ರಸಾರಿತ ಹಸ್ತಪಾದಾಸನ

ಮಂಡಿರಜ್ಜು, ಕಾಲು ಹಾಗೂ ಪಾದಗಳನ್ನು ಹಿಗ್ಗಿಸುತ್ತದೆ. ಬೆನ್ನೆಲುಬನ್ನು ಹಿಗ್ಗಿಸುವುದರ ಜೊತೆಗೆ ಇದು ಹೊಟ್ಟೆಯ ಭಾಗವನ್ನು ಬಲಪಡಿಸುತ್ತದೆ

5. ತ್ರಿಕೋಣಾಸನ

ಕಾಲು, ಮಂಡಿ, ಕಣಕಾಲು ಬಾಹುಗಳು, ಎದೆಭಾಗಗಳನ್ನು ಬಲಪಡಿಸುತ್ತದೆ. ಇದು ಪೃಷ್ಠ, ತೊಡೆಯ ಸಂದು, ಮಂಡಿ ರಜ್ಜು, ಮೀನಖಂಡ, ಭುಜ ಹಾಗೂ ಎದೆಯ ಭಾಗಗಳನ್ನು ಹಿಗ್ಗಿಸುತ್ತದೆ. ಇದು ದೈಹಿಕ ಹಾಗೂ ಮಾನಸಿಕ ಸಂತುಲತೆಯನ್ನು ಹೆಚ್ಚಿಸುವುದೆಂದು ಹೇಳಲಾಗುತ್ತದೆ.

6. ವೃಕ್ಷಾಸನ

ಕಾಲುಗಳನ್ನು ಬಲಪಡಿಸುವುದರ ಜೊತೆಗೆ ಸಮತೋಲನವನ್ನು ಉತ್ತಮಗೊಳಿಸುತ್ತದೆ. ಪೃಷ್ಠದ ಸ್ನಾಯುಗಳನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ದೇಹಕ್ಕೆ ತಾರುಣ್ಯವನ್ನು ಜೊತೆಗೆ ಓಟಗಾರನ ದೇಹಕ್ಕೆ ಹಾಗೂ ಮನಸ್ಸಿಗೆ ಸಂತುಲತೆಯನ್ನು ತಂದುಕೊಡುತ್ತದೆ.

7. ವೀರಭದ್ರಾಸನ

ಬಾಹುಗಳನ್ನು, ಬೆನ್ನಿನ ಹಿಂಭಾಗ ಹಾಗೂ ಕಾಲುಗಳಿಗೆ ಬಲವನ್ನುಂಟುಮಾಡುತ್ತದೆ. ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಸಮತೋಲನವನ್ನು ಹೆಚ್ಚಿಸುತ್ತದೆ

8. ಕೋಣಾಸನ

ಇದು ಶರೀರವನ್ನು ಮತ್ತು ಬೆನ್ನೆಲುಬನ್ನು ಹಿಗ್ಗಿಸಲು ಸಹಾಯಕಾರಿ. ಬಾಹು, ಕಾಲು ಹಾಗೂ ಕಿಬ್ಬೊಟ್ಟೆಯ ಅಂಗಗಳನ್ನು ಹುರಿಗೊಳಿಸುತ್ತದೆ.

9. ಪೂರ್ವೋತ್ಥಾಸನ

ಪೃಷ್ಠಭಾಗ ಹಾಗೂ ಕಾಲುಗಳನ್ನು ಹಿಗ್ಗಿಸುತ್ತದೆ. ಮಣಿಕಟ್ಟು, ಬಾಹುಗಳು, ಭುಜ, ಬೆನ್ನು ಹಾಗೂ ಬೆನ್ನೆಲುಬನ್ನು ಬಲಪಡಿಸುತ್ತದೆ.

10. ಉತ್ಕಟಾಸನ

ಬೆನ್ನೆಲುಬು, ಪೃಷ್ಠಭಾಗ ಹಾಗೂ ಎದೆಯ ಸ್ನಾಯುಗಳಿಗೆ ಒಳ್ಳೆಯ ವ್ಯಾಯಾಮ. ತೊಡೆ, ಕಣಕಾಲು, ಕಾಲು ಹಾಗೂ ಮಂಡಿಯ ಸ್ನಾಯುಗಳನ್ನು ಹುರಿಗೊಳಿಸುತ್ತದೆ.

ಓಡುವುದು ಒಂದು ಉತ್ತಮ ಆರೋಗ್ಯಕರ ವ್ಯಾಯಾಮ. ಇದು ದೈಹಿಕವಾಗಿ ನಮ್ಮನ್ನು ಉತ್ತಮ ಸ್ಥಿತಿಯಲ್ಲಿಡುವುದರ ಜೊತೆಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಓಡುವುದನ್ನು ಇಷ್ಟಪಡುತ್ತೀರಾದರೆ ನಿಮ್ಮ ಹತ್ತಿರದಲ್ಲಿರುವ ಸ್ಥಳೀಯ ಓಟದ ಗುಂಪುಗಳಿಗೆ ಸೇರಿಕೊಳ್ಳಬಹುದು. ಕಾಲಕ್ರಮಮೇಣ ದೀರ್ಘ ಓಟ (ಮ್ಯಾರಥಾನ್)ಗಳಲ್ಲಿಯೂ ಭಾಗವಹಿಸಬಹುದು.  ಓಟದ ಬಗೆಗಿರುವ ನಿಮ್ಮ ಆಸಕ್ತಿಗೆ ಯೋಗವನ್ನೂ ಸೇರಿಸಿಕೊಂಡಾಗ ಓಟವನ್ನು ಆನಂದಿಸುವ ನಿಮ್ಮ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ.