ಸರಳುಗಳಾಚೆಗಿನ ಸ್ವಾತಂತ್ರ್ಯ

ನಿಧಾನಕ್ಕೆ ಸುರಿಯುತ್ತಿದ್ದ ನಲ್ಲಿಯ ನೀರನ್ನು ಮುಖದ ಮೇಲೆ ಎರಚಿಕೊಳ್ಳುತ್ತಾನೆ ಆತ. ಕಣ್ಣುಗಳನ್ನು ಇರಿಯುವ
ಮುಂಜಾವಿನ ಕಿರಣಗಳು ಮಾಮೂಲಿನಂತೆ ಇನ್ನೊಂದು ದಿನದ ಆರಂಭವನ್ನು ಸೂಚಿಸುತ್ತವೆ. ಸ್ನಾನ ಮಾಡಿ ಬಿಳಿ ಬಟ್ಟೆ, ಗಾಂಧಿ ಟೋಪಿ ಧರಿಸಿ ತನ್ನ ಕೊಠಡಿಯಲ್ಲಿ ಕುಳಿತು ಸುತ್ತಲಿನ ನಾಲ್ಕು ಖಾಲಿ ಗೋಡೆಗಳನ್ನು ನಿರುಕಿಸುವ ಆತನ ಕಣ್ಣುಗಳಲ್ಲಿ ಕಳೆದುಹೋದುದರ ಪ್ರತಿಫಲನ. ಆದರೆ ಹೊಳೆಯುವ ಸೂರ್ಯನ ಪ್ರಖರ ಕಿರಣಗಳು ಅವನನ್ನು ತನ್ನ ಭವಿಷ್ಯದತ್ತ ಆಶಾಭಾವನೆ ಹೊಂದುವಂತೆ ಮಾಡುತ್ತವೆ. ತನ್ನ ಕೊಠಡಿಯ ಗೋಡೆಗಳ ನಡುವೆ ಆತ ನಮ್ಮ ನಿಮ್ಮೆಲ್ಲರಂತೆ ಸಾಧಾರಣ ಮನುಷ್ಯ. ಆದರೂ ಈ ಗೋಡೆಗಳಿಂದಾಚೆ ಆತನ ಕೈಗಳಿಗೆ ಬಿದ್ದಿವೆ ಕೋಳಗಳು, ಸುತ್ತುವರೆದಿದ್ದಾರೆ ಪೋಲೀಸರು, ಸದಾ ಕಣ್ಣಿಟ್ಟಿದೆ ಸಮಾಜ.\

ದಿನಚರಿಯ ಭಾಷೆಯಲ್ಲಿ ಹೇಳುವುದಾದರೆ ಒಬ್ಬ ಖೈದಿಯ ಬದುಕು ಸಾಮಾನ್ಯವಾದದ್ದು. ಆದರೆ ಮಾನಸಿಕವಾಗಿ ಅದೊಂದು ಭಾವನೆಗಳ ಪ್ರಕ್ಷುಬ್ಧ ಸ್ಥಿತಿ- ಸೇಡಾಗಿರಬಹುದು, ಪಶ್ಚಾತ್ತಾಪವಾಗಿರಬಹುದು, ದುಃಖ, ನೋವು ಏನೆಲ್ಲ ಇರಬಹುದು. ಒಂದು ವರುಷದ ಹಿಂದೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿಯೂ ಪರಿಸ್ಥಿತಿ ಹೀಗೇ ಇತ್ತು. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ವಸ್ತುಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆಯಾಗಿದೆ, ಒಳಗಿರುವ ಖೈದಿಗಳು ಬದಲಾಗಿದ್ದಾರೆ, ಅವರ ನಡವಳಿಕೆ ಬದಲಾಗಿದೆ.

ಕೊಲೆ ಸುಲಿಗೆಗಳಂತಹ ಘೋರ ಅಪರಾಧಗಳನ್ನು ಎಸಗಿದ ಕಾರಣ ಅವರನ್ನು ಬಂಧನದಲ್ಲಿಡಲಾಗಿತ್ತು. ಆದರೂ ಪರಿವರ್ತನೆಯೊಂದೇ ಶಾಶ್ವತವಾದದ್ದು ಎನ್ನುತ್ತಾರಲ್ಲ, ಹಾಗೇ ಅವರೂ ಕೂಡ ಪರಿವರ್ತನೆಗೆ ಒಳಗಾದರು. ಬದಲಾದರು.

ಈಗ ಅವರು ಬದುಕುವುದರ ಬಗ್ಗೆ ಪಾಠ ಹೇಳುತ್ತಾರೆ…..

ಇದೆಲ್ಲವೂ ಆರಂಭವಾಗಿದ್ದು ಒಂದು ವರುಷದ ಹಿಂದೆ, ಬೆಂಗಳೂರಿನ ಕೇಂದ್ರ ಕಾರಾಗೃಹದ ಮೂವತ್ತು ಖೈದಿಗಳಿಗೆ
ಜೀವನ ಕಲೆಯ ಯುವ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು(YLTP) ಪರಿಚಯಿಸುವುದರ ಜೊತೆಗೆ. ಈ ಕಾರ್ಯಕ್ರಮವು ವ್ಯಕ್ತಿಯನ್ನು ಆತ್ಮನಿರ್ಭರನಾಗುವಂತೆ, ಸಮಾಜದ ಒಳಿತಿಗಾಗಿ ಕಾರ್ಯೋನ್ಮುಖನಾಗುವಂತೆ ಮಾಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲ್ಪಟ್ಟಿದೆ.

“ನಾವು ಅವರಿಗೋಸ್ಕರ ಆಯೋಜಿಸಿದ ೯೦ ದಿನಗಳ YLTP ಕಾರ್ಯಕ್ರಮ ಸಾಮಾನ್ಯ ಕಾರ್ಯಕ್ರಮದ ಚೌಕಟ್ಟಿಗಿಂತ ಸ್ವಲ್ಪ ಭಿನ್ನವಾಗಿತ್ತು. ಅವರು ಪ್ರತಿದಿನ, ತಮ್ಮ ಗತಜೀವನದ ಆಗುಹೋಗುಗಳ ಹಿನ್ನೆಲೆಯಲ್ಲಿ ಮನಸ್ಸು ಹಾಗೂ ಭಾವನೆಗಳ ನಿರ್ವಹಣೆಯನ್ನು ಕಲಿಯಲು ಅಗತ್ಯವಾದ ತೀವ್ರತರಹದ ಯೋಗ ಹಾಗೂ ಧ್ಯಾನದ ಪ್ರಕ್ರಿಯೆಗಳನ್ನು ಅಭ್ಯಾಸ ಮಾಡಬೇಕಾಗಿತ್ತು.  ಭಜನೆ, ಹಾಡುಗಳಿಂದ ಕೂಡಿದ, ಬದುಕಿನ ಕುರಿತಾಗಿ ಕೆಲವು ವ್ಯಾವಹಾರಿಕ ಕಿವಿಮಾತುಗಳನ್ನು ಹೇಳುವ ಸಾಯಂಕಾಲದ ಸಭೆಗಳೂ ಇರುತ್ತಿದ್ದವು. ಈ ಕಾರ್ಯಕ್ರಮವು ತುಂಬಾ ಅವಶ್ಯಕವಾದುದಾಗಿತ್ತು, ವಿಶೇಷವಾಗಿ ಅಪೇಕ್ಷಿತ ಬದಲಾವಣೆಗಳನ್ನು ತರಲು ಅಗತ್ಯವಾಗಿದ್ದ ಸುದರ್ಶನ ಕ್ರಿಯೆ ಎಂಬ ಉಸಿರಾಟದ ವಿಧಾನ.” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಶ್ರೀ ನಾಗರಾಜ ಗಂಗೊಳ್ಳಿ, ಪ್ರೊಜೆಕ್ಟ್ ಡೈರೆಕ್ಟರ್, ಪ್ರಿಸನ್ ಪ್ರೊಗ್ರಾಮ್ ಫಾರ್ ಕರ್ನಾಟಕ (ಯೋಜನಾ ನಿರ್ದೇಶಕರು, ಕರ್ನಾಟಕ ಕಾರಾಗೃಹ ಯೋಜನೆ).

ಹೆಚ್ಚಾಗಿ ಸರಾಸರಿ ಒಂದರಿಂದ ಹನ್ನೆರಡು ವರ್ಷಗಳ ಸೆರೆವಾಸ ಅನುಭವಿಸಿದ ಅಪರಾಧಿಗಳನ್ನೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಆರಿಸಲಾಗಿತ್ತು. ಕಾರ್ಯಕ್ರಮದ ಮೊದಲನೇ ತಂಡದ ಸದಸ್ಯರನ್ನು ಪೋಲೀಸರೇ ಸ್ವತಃ ಆಯ್ಕೆ ಮಾಡಿದ್ದರು. ಮೊದಲನೇ ತಂಡದ ಸದಸ್ಯರಲ್ಲಿ ಆದ ಪರಿವರ್ತನೆಯನ್ನು ನೋಡಿ ಎರಡನೇ ತಂಡದ ಸದಸ್ಯರಾಗಲು ಉಳಿದವರು ತಾವಾಗಿಯೇ ಮುಂದೆ ಬಂದರು

ಅವರು ಎರಡು ಉನ್ನತ ಧ್ಯಾನ ಶಿಬಿರಗಳಲ್ಲಿ ಪಾಲ್ಗೊಂಡರು. ಹಳೆಯ ಭಾವನಾತ್ಮಕ ಆಘಾತಗಳಿಂದ ಚೇತರಿಸಿಕೊಳ್ಳಲು, ತಮ್ಮ ಬಗ್ಗೆ ಹೊಂದಿದ್ದ ಅಭಿಪ್ರಾಯಗಳಿಂದ ಹೊರಬರಲು, ಭಯದಿಂದ ಮುಕ್ತರಾಗಲು, ದೃಷ್ಠಿಕೋನವನ್ನು ಬದಲಾಯಿಸಿಕೊಳ್ಳಲು ಇದು ಸಹಕಾರಿಯಾಯಿತು.  ಅಂತಃಸ್ಥಿರತೆಯನ್ನು ಹೇಗೆ ಸಾಧಿಸಬೇಕು, ತಮ್ಮಲ್ಲಿ ಹಾಗೂ ತಮ್ಮ ಭವಿಷ್ಯದಲ್ಲಿ ನಂಬಿಕೆ ಹೇಗೆ ಬೆಳೆಸಿಕೊಳ್ಳಬೇಕು ಎಂಬುದನ್ನು ಕೂಡ ಇದು ತೋರಿಸಿಕೊಟ್ಟಿತು.

“ಮೊದಲು ತಮ್ಮ ಸಮಯವನ್ನು ಇಸ್ಪೀಟು ಆಡುವುದರಿಂದ ಹಿಡಿದು ಬಿಡುಗಡೆಯಾದ ನಂತರ ಹಳೆಯ ಅಪರಾಧವನ್ನೇ ಇನ್ನೂ ದೊಡ್ಡ ಮಟ್ಟದಲ್ಲಿ ಹೇಗೆ ಎಸಗುತ್ತ ಹೋಗಬಹುದು ಎನ್ನುವ ಬಗ್ಗೆ ಯೋಜನೆ ಹಾಕುವುದರ ತನಕ ಏನೆಲ್ಲ ಕೆಲಸಗಳಲ್ಲಿ ತೊಡಗುತ್ತಿದ್ದರು ಅವರು. ಈಗ ಹಾಗಿಲ್ಲ.” ಎನ್ನುತ್ತಾರೆ ನಾಗರಾಜ.

ಅವರೀಗ ಮುಂದಾಳುಗಳು!

ಅದೇ ಹೊತ್ತಿಗೆ, ಪೋಲೀಸರೂ ಸೇರಿದಂತೆ ಜೀವನಕಲಾ ಶಿಕ್ಷಕರ ಒಂದು ಸಮಿತಿಗೆ ಮನದಟ್ಟಾದ ಸಂಗತಿಯೆಂದರೆ, ಖೈದಿಗಳೇ ಶಿಕ್ಷಕರಾಗಿ ತಮ್ಮ ಸಹಚರರಿಗೆ ಕಲಿಸತೊಡಗಿದರೆ ಇನ್ನೂ ಹೆಚ್ಚಿನ ಪ್ರಮಾಣದ ಪರಿವರ್ತನೆ ಸಾಧ್ಯ ಎನ್ನುವುದು. ಹೀಗೆ ಹಿಂದೆ ಭಯಂಕರ ಅಪರಾಧಿಗಳಾಗಿದ್ದವರು ಸೆರೆಮನೆಯಲ್ಲಿದ್ದ ಇನ್ನಿತರ ಕೈದಿಗಳಿಗೆ ಧ್ಯಾನ ಮತ್ತು ಯೋಗವನ್ನು ಕಲಿಸುವ ಶಿಕ್ಷಕರಾದರು. ಯುವಾಚಾರ್ಯರೆಂಬ (ಯುವ ಮುಂದಾಳುಗಳು) ಹೆಸರಿನಿಂದ ಗುರುತಿಸಲ್ಪಡುತ್ತಿದ್ದ ಕಾರಾಗೃಹ-ಶಿಕ್ಷಕರ ವಿಶೇಷ ಹಾಗೂ ಹೆಮ್ಮೆಯ ತಂಡವನ್ನು ಇತರರು ಗೌರವದಿಂದ ಕಾಣತೊಡಗಿದರು.

“ಕಾರಾಗೃಹದಲ್ಲಿನ ಎಲ್ಲ ೪೦೦೦ ಕೈದಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿತ್ತು. ಇನ್ನಿತರ ಕೈದಿಗಳಿಗೆ ತರಬೇತಿ ನೀಡುವ ಕೆಲಸದಲ್ಲಿ ಅವರಲ್ಲಾಗುವ ಬದಲಾವಣೆಯನ್ನು ನೋಡಿದಾಗ ನನಗೆ ಸಂತೋಷ ಹಾಗೂ ತೃಪ್ತಿಯ ಭಾವನೆಯುಂಟಾಗುತ್ತದೆ.” ಎಂದು ಕಾರಾಗೃಹ-ಶಿಕ್ಷಕರಾದ ಮೋಹನ್ ಕುಮಾರ್ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಸೇರಿಸುತ್ತಾರೆ, “ಕಾರ್ಯಕ್ರಮ ಮುಗಿದ ನಂತರ ಹನ್ನೆರಡು ವರ್ಷಗಳಿಂದ ಮುಚ್ಚಿಟ್ಟುಗೊಂಡಿದ್ದ ಒತ್ತಡ ಒಮ್ಮೆಗೇ ಮಾಯವಾದ ಅನುಭವವಾಯಿತು. ಯೋಗ ಹಾಗೂ ಧ್ಯಾನಗಳಿಂದಾಗಿ ನನ್ನಲ್ಲಿ ಅಗಾಧ ಆತ್ಮವಿಶ್ವಾಸ ಹುಟ್ಟಿದೆ. ಬದಿಕಿನೆಡೆಗೆ ನನ್ನ ದೃಷ್ಠಿಕೋನವೇ ಬದಲಾಯಿತು. ಮನಸ್ಸನ್ನು ಹೆಚ್ಚು ಕೇಂದ್ರೀಕರಿಸಲು ಸಾಧ್ಯವಾಯಿತು.”

ವರ್ಷಗಳ ಕಾಲ ಸೆರೆಮನೆಯಲ್ಲಿ ಚಟುವಟಿಕೆಗಳಿಲ್ಲದ ಬದುಕಿನ ಶೈಲಿ ಹಾಗೂ ಭವಿಷ್ಯದ ಬಗ್ಗೆ ಭರವಸೆಯೇ ಇಲ್ಲದ ದಿನಗಳನ್ನು ಕಳೆದ ಬಳಿಕ ಇದೊಂದು ಅತ್ಯಂತ ಸ್ವಾಗತಾರ್ಹ ಬದಲಾವಣೆ ಎನ್ನುತ್ತಾರೆ ಕಾರಾಗೃಹ ಅಧಿಕಾರಿಗಳು.

ರಾಜ್ಯ ಪೋಲೀಸ್ ಇಲಾಖೆಯ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಎಸ್. ರವಿ ಐಪಿಎಸ್ ಅವರು ಹೇಳುವಂತೆ, “ಸಾಮಾನ್ಯ ಒಳಿತಿನಲ್ಲಾದ ಪರಿವರ್ತನೆ ಸಮಗ್ರವಾದದ್ದು. ಅವರಿಗೆ ಅಪರಾಧವನ್ನು ಎಸಗುವುದು ಅಭ್ಯಾಸವಾಗಿಹೋಗಿತ್ತು. ಆದರೆ ಒಮ್ಮೆ ಈ ಕಾರ್ಯಕ್ರಮವು ಅವರಲ್ಲಿ ಬದಲಾವಣೆ ಉಂಟುಮಾಡಿದ ಮೇಲೆ ಅವರ ಉತ್ಪಾದಕತೆ ಹೆಚ್ಚಿದೆ, ಸಮಗ್ರ ವ್ಯಕ್ತಿತ್ವದಲ್ಲಿಯೇ ಬದಲಾವಣೆಯಾಗಿದೆ. ಈಗ ಅವರು ಯಾವುದೇ ಕಳಂಕವಿಲ್ಲದೇ ಸುಲಭವಾಗಿ ಸಮಾಜದಲ್ಲಿ ಬೆರೆತುಹೋಗಬಹುದು. ಯುವಾಚಾರ್ಯರ ಬಲವನ್ನು ಅವರಿಗೆ ಕೊಟ್ಟ ತರಬೇತಿಯು ಇನ್ನಷ್ಟು ಪ್ರಕ್ರಿಯೆಗಳಿಗೆ ಕಾರಣವಾಯಿತು- ಅವರು ಇನ್ನಿತರ ಖೈದಿಗಳಿಗೆ ತರಬೇತಿ ನೀಡತೊಡಗಿದರು.”

ಇಂದು, ಮೂವತ್ತು ಜನ ಖೈದಿಗಳೂ ಎತ್ತರಕ್ಕೆ ಬೆಳೆದು ನಿಂತಿದ್ದಾರೆ- ಕರ್ನಾಟಕದುದ್ದಗಲಕ್ಕೂ ಬೀದರ್, ಬಳ್ಳಾರಿ, ಕಲಬುರ್ಗಿ, ವಿಜಯಪುರ, ಧಾರವಾಡ ಹಾಗೂ ಮೈಸೂರು ಸೇರಿದಂತೆ ಏಳು ಕಾರಾಗೃಹಗಳಲ್ಲಿ ೨೫೦೦ಕ್ಕೂ ಹೆಚ್ಚಿನ ಕೈದಿಗಳ ಜೀವನವನ್ನು ಪರಿವರ್ತಿಸಿದ ಹೆಗ್ಗಳಿಕೆ ಅವರದು.

ಕೊನೆಯಲ್ಲಿ, ಅವರು ಭೇಟಿಯಾದರು….

ಅಪರಾಧಿಗಳಾಗಿದ್ದ ಈ ಮೂವತ್ತು ಖೈದಿಗಳು ಜೀವನ ಕೌಶಲ್ಯ ತರಬೇತಿಗಾರರಾಗಿ ಮಾರ್ಪಡುವವರೆಗಿನ ಪಯಣ ಕೇವಲ ಬೆಂಗಳೂರಿನ ಕೇಂದ್ರ ಕಾರಾಗೃಹದ ನಾಲ್ಕು ಬೃಹತ್ ಗೋಡೆಗಳ ಒಳಗೆ ಸೀಮಿತವಾಗಿತ್ತು. ಪರಿವರ್ತನೆಯಿಂದ ನಿಬ್ಬೆರಗಾದ ಖೈದಿಗಳು ತಮ್ಮ ಜೀವನದಲ್ಲಿ ಉಂಟಾದ ಮಹಾನ್ ಪರಿವರ್ತನೆಯ ಹಿಂದಿರುವ ಸ್ಫೂರ್ತಿಯನ್ನು ಒಮ್ಮೆ ಭೇಟಿ ಮಾಡುವ ಅವಕಾಶವನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿನಂತಿಸಿಕೊಂಡರು. ಒಂದು ವರ್ಷದ ಕಾಯುವಿಕೆಯ ನಂತರ   ಅವರಿಗೆ ಕಾರಾಗೃಹದಿಂದ ಹೊರಗೆ ಹೋಗಿ ಅಂತರ್ರಾಷ್ಟ್ರೀಯ ಜೀವನ ಕಲಾ ಕೇಂದ್ರದಲ್ಲಿ ಅತ್ಯಂತ ವಿಶೇಷವಾದ ಒಂದು ಭೇಟಿಗೆ ಅನುಕೂಲವಾಗುವಂತೆ ಅನುಮತಿ ನೀಡಲಾಯಿತು. ನಿತ್ಯದ ಸಮವಸ್ತ್ರವನ್ನು ಬದಿಗಿಟ್ಟು ಅಚ್ಚಬಿಳಿ ಕುರ್ತಾ-ಪೈಜಾಮ ತೊಟ್ಟು ಕಡುನೀಲಿ ಬಣ್ಣದ ವಾಹನದಲ್ಲಿ ಬಂದಿಳಿದ ಮೂವತ್ತು ಜನರ ಈ ತಂಡ ಶ್ರೀ ಶ್ರೀ ರವಿ ಶಂಕರ ಗುರೂಜಿಯವರನ್ನು ಭೇಟಿ ಮಾಡಿತು. ಗುರೂಜಿಯವರ ಆಗಮನವನ್ನು ಎದುರು ನೋಡುತ್ತಲೇ ಪ್ರಾಣಾಯಾಮ ಹಾಗೂ ಧ್ಯಾನವನ್ನು ಮಾಡಿದರು ಅವರು.  ಕಣ್ಗಾವಲಿಟ್ಟಿದ್ದರೂ ಹೆಮ್ಮೆಯ ಭಾವನೆಯಲ್ಲಿ ಬೀಗುತ್ತಿದ್ದ ಪೋಲೀಸರಿಂದ ಸುತ್ತುವರೆಯಲ್ಪಟ್ಟ ಅವರ ಕೈಗಳಲ್ಲಿ ಕೋಳಗಳಿರಲಿಲ್ಲ- ತಾವಿದ್ದ ರೀತಿಯಲ್ಲಿಯೇ ಸ್ವತಂತ್ರರು, ಭೂತಕಾಲದ ನೋವಿನಿಂದ ಮುಕ್ತರು, ಬೇರೆಯೇ ತರದಲ್ಲಿ ಬದುಕನ್ನು ನಡೆಸುವ ದೃಢನಿರ್ಧಾರ ಕೈಗೊಂಡವರು.

ಅವರಲ್ಲಾದ ಪರಿವರ್ತನೆ ಹಾಗೂ ಅವರ ಪ್ರಯತ್ನವನ್ನು ಶ್ಲಾಘಿಸುತ್ತ ಗುರೂಜಿಯವರು ದೇಶದ ಒಳಿತಿಗಾಗಿ ಉತ್ತಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಸ್ಫೂರ್ತಿ ತುಂಬಿದರು. “ಪರಸ್ಪರ ನಂಬಿಕೆ ವಿಶ್ವಾಸಗಳನ್ನು ಬೆಳೆಸುವತ್ತ ಜನರಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವತ್ತ ನಾವು ಕೆಲಸ ಮಾಡಬೇಕಾಗಿದೆ.” ಎಂಬುದಾಗಿ ಹೇಳಿದರು. ರಾಜ್ಯದಾದ್ಯಂತ ಕಾರಾಗೃಹಗಳಲ್ಲಿ ಪರಿವರ್ತನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತಂಡವು ಗುರೂಜಿಯವರ ಮಾರ್ಗದರ್ಶನಕ್ಕಾಗಿ ಕೇಳಿಕೊಂಡಿತು.

32 ರ ಹರೆಯದ ಮಹೇಶ್ ಹೇಳುತ್ತಾರೆ, “ಇತ್ತೀಚೆಗೆ ನಾನು ಕಾರಾಗೃಹದಲ್ಲಿ ಯಾರೇ ಸಿಕ್ಕರೂ ಕರೆದುಕೊಂಡು ಹೋಗಿ ಯೋಗ ತರಗತಿಗೆ ಸೇರಿಸುತ್ತೇನೆ. ನನ್ನ ಬಿಡುಗಡೆಗಾಗಿ ತವಕದಿಂದ ಪ್ರಾರ್ಥಿಸುತ್ತಿದ್ದೇನೆ- ನನ್ನ ಕುಟುಂಬದೊಡನೆ ಒಂದಾಗಿ ದೇಶದ ಉತ್ತಮ ಪ್ರಜೆಯಾಗಿ ಬದುಕುವ ದಿನಗಳನ್ನು ಎದುರು ನೋಡುತ್ತಿದ್ದೇನೆ.”.”

ನಿಜಕ್ಕೂ ಅವರು ಸರಳುಗಳ ಹಿಂದೆಯೇ ಇದ್ದೂ ಮಾನಸಿಕವಾಗಿ ಸ್ವಾತಂತ್ರ್ಯ ಪಡೆದವರು

ಲೇಖಕರು: ಸಹನಾ ಹೆಗಡೆ

ಜೀವನ ಕಲಾ ಕೇಂದ್ರದ ಯೋಜನೆಗಳಿಗೆ ಕೊಡುಗೆ ನೀಡುವ ಇಚ್ಛೆ ಇದ್ದಲ್ಲಿ ದಯವಿಟ್ಟು ಸಂಪರ್ಕಿಸಿ webteam.india@artofliving.org.